Thursday, 15th May 2025

Fengal: ‘ಫೆಂಗಲ್‌ʼ ಚಂಡಮಾರುತ ಹಾವಳಿ: ತಮಿಳುನಾಡಿನಲ್ಲಿ ಭಾರೀ ಮಳೆ; ವಿಮಾನಗಳ ಹಾರಾಟ ರದ್ದು

ಚೆನ್ನೈ: ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿ ‘ಫೆಂಗಲ್'(Fengal) ಚಂಡಮಾರುತ ರೂಪುಗೊಂಡಿದ್ದು, ಇದರಿಂದ ಉತ್ತರ ತಮಿಳುನಾಡಿನ(Tamil Nadu) ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ.

ಫೆಂಗಲ್ ಚಂಡಮಾರುತ ಪುದುಚೇರಿಗೆ ಇಂದು (ನ. 30) ಅಪ್ಪಳಿಸುವ ಸಾಧ್ಯತೆಯಿದ್ದು, ಮಧ್ಯಾಹ್ನ ಕಾರೈಕಲ್ ಮತ್ತು ಮಾಮಲ್ಲಪುರಂ ಪ್ರದೇಶಗಳಲ್ಲಿ ಭೂಕುಸಿತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಶುಕ್ರವಾರ ರಾತ್ರಿಯಿಂದಲೇ ಕರಾವಳಿ ಪ್ರದೇಶಗಳಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ವಿಪತ್ತು ನಿರ್ವಹಣೆಗಾಗಿ ಪೊಲೀಸರು,ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚೆನ್ನೈನ ಎನ್ನೋರ್‌ನಲ್ಲಿ ಕಳೆದ 6-7 ಗಂಟೆಗಳಲ್ಲಿ 8 ಸೆಂ.ಮೀ. ಮಳೆಯಾಗಿದೆ. ಅಣ್ಣಾನಗರದಲ್ಲಿ 10 ಸೆಂ.ಮೀ. ಮಳೆ ದಾಖಲಾಗಿದೆ.

ಭಾರಿ ಮಳೆ ಹಿನ್ನೆಲೆ ಚೆನ್ನೈ ವಿಮಾನ ನಿಲ್ದಾಣದಲ್ಲಿ 12ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ. ತನ್ನ ಎಲ್ಲ ಆಗಮನ ಮತ್ತು ನಿರ್ಗಮನ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಇಂಡಿಗೊ ವಿಮಾನ ಯಾನ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ, ಅಬು ಧಾಬಿಯಿಂದ ಚೆನ್ನೈಗೆ ಆಗಮಿಸುತ್ತಿದ್ದ ಇಂಡಿಗೊ ವಿಮಾನ (6E1412)ದ ಮಾರ್ಗವನ್ನು ಬೆಂಗಳೂರಿಗೆ ಬದಲಿಸಲಾಗಿದ್ದು, ಭಾರಿ ಮಳೆಯಿಂದಾಗಿ ಚೆನ್ನೈ ವಲಯದ ಎಲ್ಲ ಉಪನಗರ ವಿಭಾಗಗಳ ಸ್ಥಳೀಯ ರೈಲುಗಳ ಕಾರ್ಯಾಚರಣೆಯನ್ನೂ ಕಡಿತಗೊಳಿಸಲಾಗಿದೆ. ಸದ್ಯ ಮೆಟ್ರೋ ರೈಲು ಕಾರ್ಯ ನಿರ್ವಹಿಸುತ್ತಿದೆ.

ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮರೀನಾ ಮತ್ತು ಮಾಮಲ್ಲಪುರಂ ಸೇರಿದಂತೆ ಪ್ರಮುಖ ಬೀಚ್‌ಗಳಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಸರ್ಕಾರ ಈಗಾಗಲೇ ಶಿಕ್ಷಣ ಸಂಸ್ಥೆಗಳಿಗೆ ರಜೆ (ನ. 30) ಘೋಷಿಸಿದೆ. ಅಲ್ಲದೇ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಐಟಿ ಸಂಸ್ಥೆಗಳಿಗೆ ಮನವಿ ಮಾಡಿದೆ.

ಐಎಂಡಿ ʼಎಕ್ಸ್‌‌ʼ ಪೋಸ್ಟ್

ಐಎಂಡಿ (India Meteorological Department) ಗುರುವಾರ(ನ. 28) ಬೆಳಗ್ಗೆಯೇ ತನ್ನ ‘ಎಕ್ಸ್’​ ಪೋಸ್ಟ್‌ನಲ್ಲಿ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಇದರಿಂದ ಉಂಟಾಗಿರುವ ಚಂಡಮಾರುತ ನ. 30ರ ಬೆಳಗ್ಗೆ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿ ಪ್ರದೇಶಗಳಾಗಿರುವ ಕಾರೈಕಲ್​ ಮತ್ತು ಮಹಾಬಲೀಪುರಂ ಮಧ್ಯೆ ಅಪ್ಪಳಿಸಲಿದೆ. ತಮಿಳುನಾಡಿನ ಹಲವು ಪ್ರದೇಶಗಳಲ್ಲಿ 2-3 ದಿನಗಳು ನಿರಂತರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು.

ಬೆಂಗಳೂರಿನಲ್ಲೂ ಫೆಂಗಲ್‌ ಚಂಡಮಾರುತ

ಫೆಂಗಲ್ ಚಂಡಮಾರುತದ ಪ್ರಭಾವದಿಂದ ಶನಿವಾರ ಬೆಳಗ್ಗೆಯಿಂದ ಬೆಂಗಳೂರು ನಗರದ ಕೆಲವೆಡೆಗಳಲ್ಲಿ ತುಂತುರು ಮಳೆಯಾಗಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಚಂಡಮಾರುತದ ಪ್ರಭಾವ ನಗರದಲ್ಲಿ ಮುಂದಿನ ಕೆಲವು ದಿನಗಳ ಕಾಲ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಇಂದು ಕನಿಷ್ಠ ತಾಪಮಾನವು ಸುಮಾರು 18 ಡಿಗ್ರಿ ಸೆಲ್ಶಿಯಸ್ ಆಗಿರಲಿದ್ದು, ಇದು ಸಂಜೆ ಮತ್ತಷ್ಟು ಕಡಿಮೆಯಾಗಬಹುದು ಎಂದು ಊಹಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Siddaramaiah : ಸಂಪುಟ ಪುನರ್‌ ರಚನೆ ಸದ್ಯಕ್ಕಿಲ್ಲ- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ