Monday, 12th May 2025

Fengal Cyclone: ತಪ್ಪಿದ ಭಾರೀ ದುರಂತ… ಫೆಂಗಲ್‌ ಚಂಡಮಾರುತದ ನಡುವೆಯೇ ಲ್ಯಾಂಡಿಂಗ್‌ಗೆ ಹೆಣಗಾಡಿದ ವಿಮಾನ- ವಿಡಿಯೊ ಇದೆ

Viral video

ಚೆನ್ನೈ: ಫೆಂಗಲ್‌ ಚಂಡಮಾರುತ(Fengal Cyclone)ಕ್ಕೆ ಇಡೀ ತಮಿಳುನಾಡಿನ ಉತ್ತರ ಜಿಲ್ಲೆಗಳು ಮತ್ತು ಪುದುಚೇರಿ ತತ್ತರಿಸಿ ಹೋಗಿದೆ. ಭೀಕರ ಹವಾಮಾನ ವೈಪರಿತ್ಯದಿಂದಾಗಿ ಶನಿವಾರದಿಂದ ಇಂದು ಮುಂಜಾನೆ 4ಗಂಟೆವರೆಗೆ ಚೆನ್ನೈ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಶನಿವಾರದಂದು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರವಾದ ಹವಾಮಾನ ವೈಪರಿತ್ಯದಿಂದಾಗಿ ವಿಮಾನವೊಂದು ಲ್ಯಾಂಡಿಂಗ್‌ಗಾಗಿ ಪರದಾಡಿರುವ ವಿಡಿಯೊವೊಂದು ಇದೀಗ ವೈರಲ್‌ ಆಗುತ್ತಿದೆ. ಚಂಡಮಾರುತ ಮತ್ತು ಕಡಿಮೆ ಗೋಚರತೆಯ ನಡುವೆ ವಿಮಾನವೊಂದು ಲ್ಯಾಂಡಿಂಗ್‌ಗಾಗಿ ಹೆಣಗಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ(Viral Video).

ಫೆಂಗಲ್ ಚಂಡಮಾರುತದ ಭೂಕುಸಿತಕ್ಕೂ ಮುನ್ನ ಇಂಡಿಗೋ ವಿಮಾನವೊಂದು ಚೆನ್ನೈನಲ್ಲಿ ಇಳಿಯಲು ಹೆಣಗಾಡುತ್ತಿರುವ ವಿಡಿಯೊ ಇದಾಗಿದೆ. ನಿನ್ನೆ ನಗರದಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಗೆ ಚಂಡಮಾರುತ ಕಾರಣವಾದ ಕಾರಣ ವಿಮಾನವು ಭಾರೀ ಪ್ರಕ್ಷುಬ್ಧತೆಯ ನಡುವೆ ಇಳಿಯಲು ಪ್ರಯತ್ನಿಸಿದೆ. ಕೊನೆಯ ಕ್ಷಣದಲ್ಲಿ, ಇದರ ಲ್ಯಾಂಡಿಂಗ್‌ ಅನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ತಿರುಗಿ ಹಾರಿಹೋಗುತ್ತದೆ. ಆದರೆ ಇದಕ್ಕೂ ಮುನ್ನ ಗಾಳಿಯಲ್ಲೇ ಗಿರಕಿ ಹೊಡೆದಿದೆ.

“ಮಳೆ ಮತ್ತು ಬಲವಾದ ಗಾಳಿ ಸೇರಿದಂತೆ ಪ್ರತಿಕೂಲ ಹವಾಮಾನದ ಕಾರಣ ಮುಂಬೈ ಮತ್ತು ಚೆನ್ನೈ ನಡುವೆ ಕಾರ್ಯನಿರ್ವಹಿಸುತ್ತಿದ್ದ 6E 683 ಇಂಡಿಗೋ ವಿಮಾನ ಸರಕ್ಷಿತ ಲ್ಯಾಂಡಿಂಗ್‌ಗಾಗಿ ಹರಸಾಹಸಪಟ್ಟಿದೆ. ಆದರೆ ಪೈಲಟ್‌ಗಳ ಕಾರ್ಯಕ್ಷಮತೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಇಂಡಿಗೋ ವಿಮಾನಯಾನ ಸಂ‍ಸ್ಥೆ ಸ್ಪಷ್ಟನೆ ನೀಡಿದೆ.

ಇನ್ನು ಈ ಭಯಾನಕ ವಿಡಿಯೊ ನೋಡಿದ ಅನೇಕರು ಇಂತಹ ಪ್ರಕ್ಷುಬ್ಧ ವಾತಾವರಣದ ನಡುವೆಯೂ ವಿಮಾನವನ್ನು ಲ್ಯಾಂಡಿಂಗ್‌ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಇದು ಹುಚ್ಚಾಟ ಪರಮಾವಧಿ ಎಂದು ಇನ್ನು ಕೆಲವರು ಕಿಡಿಕಾರಿದ್ದಾರೆ.

ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಅಬ್ಬರಿಸುತ್ತಿರುವ ಫೆಂಗಲ್‌ ಚಂಡಮಾರುತ ಜನರ ಜೀವನವನ್ನು ದುಸ್ತರಗೊಳಿಸಿದೆ. ಚೆನ್ನೈ (Chennai) ಹಾಗೂ ಪುದುಚೇರಿಯ ಕೆಲ ಭಾಗಗಳು ಸಂಪೂರ್ಣ ಜಲಾವೃತವಾಗಿದ್ದು, ಜನ ಪರದಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಈವರೆಗೆ ವಿದ್ಯುತ್‌ ತಗುಲಿ ಹಾಗೂ ಭೂಕುಸಿತದಿಂದಾಗಿ ನಾಲ್ವರು ಮತೃಪಟ್ಟಿದ್ದಾರೆ. ಶನಿವಾರ ಚೆನ್ನೈನ ವಿಮನ ನಿಲ್ದಾಣ ಜಲಾವೃತವಾಗಿದ್ದು, ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಫೆಂಗಲ್‌ನಿಂದಾಗಿ ಚೆನ್ನೈನ ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಮುಂದಿನ ಮೂರು ಗಂಟೆಗಳಲ್ಲಿ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡು ಹಾಗೂ ಪುದುಚೇರಿ ಕರಾವಳಿಯ ಕಾರೈಕಲ್‌ ಮತ್ತು ಮಹಾಬಲಿಪುರಂ ನಡುವೆ ಫೆಂಗಲ್‌ ಚಂಡಮಾರುತ ಹಾದು ಹೋಗಲಿದ್ದು, ಗಂಟೆಗೆ 70-80 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Fengal: ‘ಫೆಂಗಲ್‌ʼ ಚಂಡಮಾರುತ ಹಾವಳಿ: ತಮಿಳುನಾಡಿನಲ್ಲಿ ಭಾರೀ ಮಳೆ; ವಿಮಾನಗಳ ಹಾರಾಟ ರದ್ದು