Monday, 12th May 2025

Fengal Cyclone: ಫೆಂಗಲ್‌ ಆರ್ಭಟಕ್ಕೆ ನಾಲ್ಕು ಬಲಿ… ವಿಮಾನ ಸಂಚಾರ ಪುನರಾರಂಭ

Fengal Cyclone

ಚೆನ್ನೈ: ತಮಿಳುನಾಡು (Tamil Nadu) ಸೇರಿದಂತೆ ಹಲವು ರಾಜ್ಯಗಳಲ್ಲಿ ಅಬ್ಬರಿಸುತ್ತಿರುವ ಫೆಂಗಲ್‌ ಚಂಡಮಾರುತ (Fengal Cyclone) ಜನರ ಜೀವನವನ್ನು ದುಸ್ತರಗೊಳಿಸಿದೆ. ಚೆನ್ನೈ (Chennai) ಹಾಗೂ ಪುದುಚೇರಿಯ ಕೆಲ ಭಾಗಗಳು ಸಂಪೂರ್ಣ ಜಲಾವೃತವಾಗಿದ್ದು, ಜನ ಪರದಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಈವರೆಗೆ ವಿದ್ಯುತ್‌ ತಗುಲಿ ಹಾಗೂ ಭೂಕುಸಿತದಿಂದಾಗಿ ನಾಲ್ವರು ಮತೃಪಟ್ಟಿದ್ದಾರೆ. ಶನಿವಾರ ಚೆನ್ನೈನ ವಿಮನ ನಿಲ್ದಾಣ ಜಲಾವೃತವಾಗಿದ್ದು, ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಫೆಂಗಲ್‌ನಿಂದಾಗಿ ಚೆನ್ನೈನ ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಮುಂದಿನ ಮೂರು ಗಂಟೆಗಳಲ್ಲಿ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡು ಹಾಗೂ ಪುದುಚೇರಿ ಕರಾವಳಿಯ ಕಾರೈಕಲ್‌ ಮತ್ತು ಮಹಾಬಲಿಪುರಂ ನಡುವೆ ಫೆಂಗಲ್‌ ಚಂಡಮಾರುತ ಹಾದು ಹೋಗಲಿದ್ದು, ಗಂಟೆಗೆ 70-80 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗಳು ರೋಗಿಗಳ ಜನರ ಪರದಾಟ

ಚೆನ್ನೈ ನಗರದಲ್ಲಿರುವ ಕೆಲ ಆಸ್ಪತ್ರೆಗಳು ಮುಳುಗಡೆಯಾಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್‌ ಬೇಸ್‌ ಸೇರಿದಂತೆ ಹಲವು ಮನೆಗಳು ಮುಳುಗಡೆಯಾಗಿವೆ. ಜನವಸತಿ ಅಧಿಕವಿರುವ ಪ್ರದೇಶಗಳಾದ ಮಾಂಬಳಮ್, ಕೋಡಂಬಾಕಂ, ಮಾದಿಪಕ್ಕಂ, ಕೀಳಕಟ್ಟಳೈ, ಅಶೋಕನಗರ, ನುಂಗಂಬಾಕಂ, ಆಳ್ವಾರ್‌ಪೇಟ್, ಪೆರಂಬೂರು ಹಾಗೂ ಪುರಸಾಯಿವಲ್ಕಮ್‌ಗಳಲ್ಲಿ ರಸ್ತೆ, ಮನೆಗಳಲ್ಲಿ ನೀರು ನಿಂತು ತೊಂದರೆಯಾಗಿದೆ. ಈಗಾಗಲೇ ಹಲವು ಕಡೆ ನಿರಾಶ್ರಿತ ಶಿಬಿರ ತೆರೆಯಲಾಗಿದ್ದು,  ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಸುಮಾರು 2.32 ಲಕ್ಷ ಜನರಿಗೆ ಆಹಾರವನ್ನು ವಿತರಿಸಿದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗಿದ್ದು, ದಕ್ಷಿಣ ರೈಲ್ವೆ ಸೇವೆಗಳಲ್ಲಿ ಬದಲಾವಣೆಗಳನ್ನು ಘೋಷಿಸಲಾಗಿದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ತಮಿಳುನಾಡಿನ ಕೆಲವು ಕಡೆ ಭೂಕುಸಿತವಾಗಿದ್ದು, ಮಳೆಯಿಂದಾಗಿ ನಾಲ್ವರು ಮೃತ ಪಟ್ಟಿದ್ದಾರೆ. ಚೆನ್ನೈ ನಗರದಲ್ಲಿ ಎಟಿಎಂನಿಂದ ಹಣ ತೆಗೆಯಲು ಹೋದ ಉತ್ತರಪ್ರದೇಶ ಮೂಲದ ಕಾರ್ಮಿಕನೊಬ್ಬ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದಾನೆ.

ಬೀಚ್ ಪ್ರವೇಶ ನಿಷೇಧ

ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಅಲೆಗಳು ಪ್ರಕ್ಷುಬ್ಧವಾಗಿದ್ದು ಬೀಚ್ ಗೆ ತೆರಳದಂತೆ ಸರ್ಕಾರ ಜನರಿಗೆ ನಿಷೇಧ ಹೇರಿದೆ. ಮರೀನಾ ಮತ್ತು ಮಾಮಲ್ಲಪುರಂ ಸೇರಿದಂತೆ ಪ್ರಸಿದ್ಧ ಬೀಚ್‌ಗಳಿಗೆ ಜನಪ ಪ್ರವೇಶವನ್ನು ನಿರ್ಬಂಧಿಸಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಅಲ್ಲದೆ ಮೀನುಗಾರಿಕಾ ಸಿಬ್ಬಂದಿಗಳು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ವಿಮಾನ ಹಾರಾಟ ಪುನರಾರಂಭ

ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ವಿಮಾನ ಹಾರಾಟವನ್ನು ಭಾನುವಾರ ಬೆಳಗ್ಗೆ ಪುನರಾರಂಭಿಸಲಾಗಿದೆ. ವಿಮಾನ ರದ್ಧತಿಯ ಕಾರಣದಿಂದ ಪ್ರಯಾಣಿಕರು ಆಹಾರ ನೀರಿಲ್ಲದೆ ಪರದಾಡಿದ್ದಾರೆ ಎಂದು ವರದಿಯಾಗಿದೆ. ವಿಮಾನಯಾನ ಸಂಸ್ಥೆಯ ವಿರುದ್ಧ ಅವರು ಕಿಡಿ ಕಾರಿದ್ದು, ಕನಿಷ್ಟ ಮೂಲಭೂತ ಸೌಕರ್ಯ ಕೂಡ ಒದಗಿಸಿಲ್ಲ ಎಂದು ಹೇಳಿದ್ದಾರೆ. ವಿಮಾನಗಳ ಹಠಾತ್ ರದ್ದತಿಯಿಂದಾಗಿ ಅನೇಕರು 8 ರಿಂದ 10 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು.

ರಾಜ್ಯದಲ್ಲೂ ಫೆಂಗಲ್‌ ಎಫೆಕ್ಟ್‌

ಫೆಂಗಲ್‌ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು ಬೆಂಗಳೂರು ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದ್ದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ಉತ್ತರ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಉಡುಪಿ, ಬೆಳಗಾವಿ, ದಕ್ಷಿಣ ಕನ್ನಡ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾನುವಾರದಿಂದ ಮಂಗಳವಾರದವರೆಗೆ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಸುದ್ದಿಯನ್ನೂ ಓದಿ : Bengaluru Weather: ಬೆಂಗಳೂರು ಚಿಲ್! ಫೆಂಗಲ್‌ ಪ್ರಭಾವಕ್ಕೆ ಊಟಿಯಂತಾದ ರಾಜಧಾನಿ