ನವದೆಹಲಿ: ಪಂಜಾಬ್‌ನಲ್ಲಿ(Punjab) ರೈತರು ಪ್ರತಿಭಟನೆ(Farmers Protest) ನಡೆಸುತ್ತಿರುವ ಹೆದ್ದಾರಿಗಳಲ್ಲಿನ ತಡೆಗಳನ್ನು ತೆರವುಗೊಳಿಸಲು ಕೇಂದ್ರ ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಪ್ರಕರಣವು ಈಗಾಗಲೇ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದು, ಇದೇ ವಿಷಯದ ಕುರಿತು ಪುನರಾವರ್ತಿತ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್(Supreme Court) ಖಡಕ್ ಆಗಿ ಹೇಳಿದೆ.
#SupremeCourt hears PIL seeking directions to Union and Punjab govts to remove restrictions on farmers’ protest and to ensure that National Highways and railway tracks are not blocked by protesting farmers
— Live Law (@LiveLawIndia) December 9, 2024
Bench: Justices Surya Kant and Manmohan pic.twitter.com/TeIIVxsO15
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಮನಮೋಹನ್ ಅವರ ಪೀಠವು ಪಂಜಾಬ್‌ನಲ್ಲಿ ಸಾಮಾಜಿಕ ಕಾರ್ಯಕರ್ತರೆನ್ನಲಾದ ಗೌರವ್ ಲೂತ್ರಾ ಎಂಬುವವರು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ನಿಮಗೆ ಮಾತ್ರ ಸಮಾಜದ ಬಗ್ಗೆ ಕಾಳಜಿ ಇರುವುದಲ್ಲ, ಮತ್ತೆ ಮತ್ತೆ ಅರ್ಜಿ ಸಲ್ಲಿಸಬೇಡಿ. ಕೆಲವರು ಕೇವಲ ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದರೆ ಇನ್ನೂ ಕೆಲವರು ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಮಾಡುತ್ತಾರೆ ಎಂದು ಪೀಠ ಭಾರೀ ತರಾಟೆಗೆ ತೆಗೆದುಕೊಂಡಿದೆ.
ಬಾಕಿ ಇರುವ ಪ್ರಕರಣದೊಂದಿಗೆ ಅರ್ಜಿಯನ್ನು ಸೇರಿಸಲು ಲೂತ್ರಾ ಅವರ ಮನವಿಯನ್ನು ನ್ಯಾಯಾಲಯ ಮುಲಾಜಿಲ್ಲದೆ ತಿರಸ್ಕರಿಸಿದೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ರೈತರು ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಫೆಬ್ರವರಿ 13 ರಂದು ಭದ್ರತಾ ಪಡೆಗಳು ದೆಹಲಿಯತ್ತ ತೆರಳದಂತೆ ತಡೆದಿದ್ದವು ಎನ್ನಲಾಗಿದೆ.
ಪ್ರತಿಭಟನಾನಿರತ ರೈತರು ಡಿಸೆಂಬರ್ 6 ರಂದು ದೆಹಲಿ ಪ್ರವೇಶಿಸಲು ಯೋಜಿಸಿದ್ದರು. ಆದರೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ ನಂತರ ತಮ್ಮ ಮೆರವಣಿಗೆಯನ್ನು ಮುಂದೂಡಿದರು. ಭಾನುವಾರ(ಡಿ.8) ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಮತ್ತೆ ಪ್ರಾರಂಭವಾಯಿತಾದರೂ ಮತ್ತೆ ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನೆಯನ್ನು ತಡೆದರು.
ರೈತರು ಮತ್ತು ಅವರ ಸಂಘಟನೆಗಳು ಪಂಜಾಬ್‌ನ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಅನಿರ್ದಿಷ್ಟ ಅವಧಿಯವರೆಗೆ ನಿರ್ಬಂಧಿಸಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಹೆದ್ದಾರಿ ಮತ್ತು ರೈಲು ಹಳಿಗಳನ್ನು ಹೋರಾಟ ಮಾಡುವ ರೈತರಿಂದ ನಿರ್ಬಂಧಿಸಬಾರದೆಂದು ಹೇಳಿ, ಕೂಡಲೇ ಎಲ್ಲವನ್ನು ತೆರವುಗೊಳಿಸಬೇಕೆಂಬ ಸೂಚನೆಗಳನ್ನು ಅರ್ಜಿದಾರರು ತಾವು ಸಲ್ಲಿಸಿದ ಅರ್ಜಿಯ ಮೂಲಕ ನ್ಯಾಯಾಲಯಕ್ಕೆ ಕೋರಿದ್ದರು.
ರೈತರ ಪ್ರತಿಭಟನೆಗೆ ಪೋಲಿಸರಿಂದ ಅಡ್ಡಿ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 101 ರೈತರ ಗುಂಪು ಪಂಜಾಬ್–ಹರಿಯಾಣದ ಶಂಭು ಗಡಿಯಿಂದ ದೆಹಲಿಯತ್ತ ಭಾನುವಾರ(ಡಿ.8) ಮಧ್ಯಾಹ್ನ ಮತ್ತೆ ಪಾದಯಾತ್ರೆಯನ್ನು ಆರಂಭಿಸಿತ್ತು. ಆದರೆ ರೈತರು ಕೆಲವೇ ಮೀಟರ್ ದೂರ ಸಾಗುತ್ತಿದ್ದಂತೆ ಪೊಲೀಸರು ಬಹುಸ್ತರದ ಬ್ಯಾರಿಕೇಡ್‌ಗಳ ಮೂಲಕ ರೈತರನ್ನು ತಡೆದರು. ಬ್ಯಾರಿಕೇಡ್‌ಗಳತ್ತ ಧಾವಿಸುತ್ತಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿ ಆಡಳಿತದಿಂದ ಅನುಮತಿ ಪಡೆದ ನಂತರವಷ್ಟೇ ರೈತರು ‘ದೆಹಲಿ ಚಲೋ’ ನಡೆಸಬಹುದು ಎಂದು ಅಂಬಾಲಾ ಪೊಲೀಸರು ಇದಕ್ಕೂ ಮುನ್ನ ತಿಳಿಸಿದ್ದರು.
ರೈತರ ಬೇಡಿಕೆಗಳೇನು?
- ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ
- ಸಾಲ ಮನ್ನಾ- ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ
- ವಿದ್ಯುತ್ ಶುಲ್ಕ ಹೆಚ್ಚಿಸಬಾರದು
- ರೈತರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯಬೇಕು
- 2021ರ ಲಖೀಂಪುರ ಖೀರಿ ಹಿಂಸಾಚಾರ ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕು
ಈ ಸುದ್ದಿಯನ್ನೂ ಓದಿ:Vijayapura News: ತೊಗರಿ ಇಳುವರಿ ಇಲ್ಲ, ಸರಕಾರ ರೈತರಿಗೆ ಪರಿಹಾರ ನೀಡಬೇಕು: ಬಾಳು ಮುಳಜಿ ಆಗ್ರಹ