Monday, 12th May 2025

Farmers Protest: ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದ ರೈತರು; ನೋಯ್ಡಾದಲ್ಲಿ ವಾಹನ ಸಂಚಾರ ಸಹಜ ಸ್ಥಿತಿಯತ್ತ

Farmers Protest

ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆ (MSP)ಯ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿಲ್ಲಿಗೆ ಮೆರವಣಿಗೆ ಹೊರಟಿದ್ದ ಪಂಜಾಬ್‌ನ ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿದ್ದು, ನೋಯ್ಡಾ-ಗ್ರೇಟರ್‌ ನೋಯ್ಡಾ ಎಕ್ಸ್‌ಪ್ರೆಸ್‌ ವೇಯಲ್ಲಿ ಸೋಮವಾರ (ಡಿ. 2) ಸಂಜೆ ವಾಹನಗಳ ಓಡಾಟ ಪುನರಾರಂಭಗೊಂಡಿದೆ. ಈ ಮೂಲಕ ಬಹುದೊಡ್ಡ ಟ್ರಾಫಿಕ್‌ ಸಮಸ್ಯೆ ನಿವಾರಣೆಯಾದಂತಾಗಿದೆ (Farmers Protest).

ನೋಯ್ಡಾ ಅಧಿಕಾರಿಗಳೊಂದಿಗಿನ ಸಭೆಯ ನಂತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಪರಿಷತ್ (BKP) ಮುಖಂಡ ಸುಖ್ಬೀರ್ ಖಲೀಫಾ, ಕನಿಷ್ಠ ಬೆಂಬಲ ಬೆಲೆಗಳ ಜಾರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೇಂದ್ರಕ್ಕೆ 1 ವಾರದ ಸಮಯ ನೀಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ರೈತರು ಪ್ರತಿಭಟನಾ ಸ್ಥಳದಿಂದ ತೆರಳಿದ ನಂತರ ಪೊಲೀಸರು ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಿದ್ದಾರೆ ಮತ್ತು ಸಂಚಾರ ವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ಮರಳಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ನೋಯ್ಡಾ-ದಿಲ್ಲಿ ಗಡಿಯಲ್ಲಿ ಭಾರಿ ವಾಹನ ದಟ್ಟಣೆ (Delhi Traffic Jam) ಉಂಟಾಗಿತ್ತು. ಎಲ್ಲ ಕಡೆ ಬ್ಯಾರಿಕೇಡ್‌ಗಳನ್ನು ಅಳಡಿಸಲಾಗಿತ್ತು. ಎನ್‌ಸಿಆರ್‌ನ ಹಲವು ಭಾಗಗಳಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ದಿಲ್ಲಿಗೆ ಆಗಮಿಸುವ ಕೆಲವು ಮಾರ್ಗಗಳನ್ನು ಮುಚ್ಚಿ, ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿತ್ತು.

ಪ್ರತಿಭಟನೆ ಮುಂದುವರಿಸುವ ಎಚ್ಚರಿಕೆ

ರೈತರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನೋಯ್ಡಾ ಲಿಂಕ್ ರಸ್ತೆಯಲ್ಲಿರುವ ದಲಿತ ಪ್ರೇರಣಾ ಸ್ಥಳಕ್ಕೆ (ಅಂಬೇಡ್ಕರ್ ಪಾರ್ಕ್) ಸ್ಥಳಾಂತರಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಸಮಯಕ್ಕೆ ಸರಿಯಾಗಿ ಈಡೇರಿಸದಿದ್ದರೆ ರಾಷ್ಟ್ರ ರಾಜಧಾನಿಯತ್ತ ತಮ್ಮ ಮೆರವಣಿಗೆಯನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ಪವನ್ ಖತಾನಾ ಅವರು ಈ ಬಗ್ಗೆ ಮಾತನಾಡಿ, “2013ರಲ್ಲಿ ಗೌತಮ್ ಬುದ್ಧ ನಗರದ ರೈತರು ಭೂಸ್ವಾಧೀನ ಕಾಯ್ದೆಗಾಗಿ ಹೋರಾಡಿ ಅದನ್ನು ಅಂಗೀಕರಿಸಿದ್ದಾರೆ. ಆದರೆ ಅದನ್ನು ಇದುವರೆಗೆ ಜಾರಿಗೆ ತಂದಿಲ್ಲ. ಯಾವ ರೈತನಿಗೂ 4 ಪಟ್ಟು ಪರಿಹಾರ ಸಿಕ್ಕಿಲ್ಲ” ಎಂದು ಅವರು ಹೇಳಿದ್ದಾರೆ. “ಗುರಿ ತಲುಪುವರೆಗೆ ನಾವು ಮುಂದುವರಿಯುತ್ತೇವೆ. ನಾವು ಯಾವುದೇ ರಸ್ತೆಯನ್ನು ನಿರ್ಬಂಧಿಸಿಲ್ಲ. ಇದಕ್ಕೆಲ್ಲ ಆಡಳಿತ ಕಾರಣ. ನಮ್ಮ ಯೋಜನೆಯ ಪ್ರಕಾರವೇ ಮುಂದೆ ಸಾಗುತ್ತಿದ್ದೆವು” ಎಂದು ತಿಳಿಸಿದ್ದಾರೆ.

ನೋಯ್ಡಾದ ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಸಿಪಿ ಶಿವಹರಿ ಮೀನಾ ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿ, “ರೈತರು ಇಂದು ‘ದಿಲ್ಲಿ ಚಲೋ’ ಪ್ರತಿ ಘೋಷಿಸಿದ್ದರು ಮತ್ತು ನಾವು ಅವರೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿದ್ದೇವೆ. ರೈತರು ತಮ್ಮ ಬೇಡಿಕೆಗಳನ್ನು ಅಧಿಕಾರಿಗಳಿಗೆ ತಿಳಿಸಿದ್ದು, ಅವರು ಈಡೇರಿಕೆಯ ಭರವಸೆ ನೀಡಿದ್ದಾರೆ. ಸಂಚಾರ ಸಹಜ ಸ್ಥಿತಿಗೆ ಮರಳಿದೆʼʼ ಎಂದು ಮಾಹಿತಿ ನೀಡಿದ್ದಾರೆ.

ಭಾರತೀಯ ಕಿಸಾನ್ ಪರಿಷತ್ ನೇತೃತ್ವದ ರೈತರ ಮೊದಲ ಗುಂಪು ಸೋಮವಾರ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸುತ್ತಿದ್ದಂತೆ, ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ನೋಯ್ಡಾದಿಂದ ದಿಲ್ಲಿಗೆ ಪ್ರಯಾಣಿಸುವವರಿಗೆ ಸಲಹೆ ನೀಡಿದರು.

ಈ ಸುದ್ದಿಯನ್ನೂ ಓದಿ: Farmers Protest: ರೈತರಿಂದ ದೆಹಲಿ ಚಲೋ; ಭಾರೀ ಟ್ರಾಫಿಕ್‌ ಜಾಮ್‌, ಜನ ಹೈರಾಣ