Sunday, 11th May 2025

Fahad Ahmad: ಪ್ರಧಾನಿ ಮೋದಿ ಬ್ಯಾಲೆಟ್‌ ಪೇಪರ್‌ ಮೂಲಕ ನಡೆಯೋ ಎಲೆಕ್ಷನ್‌ ಗೆದ್ದರೆ 20 ವರ್ಷ ಚುನಾವಣೆಗೇ ನಿಲ್ಲಲ್ಲ- ಸ್ವರಾ ಭಾಸ್ಕರ್‌ ಪತಿ ಚಾಲೆಂಜ್‌

Fahad Ahmad

ಮುಂಬೈ: ಎನ್‌ಸಿಪಿ-ಎಸ್‌ಪಿ (NCP SP) ನಾಯಕ ಮತ್ತು ನಟಿ ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹ್ಮದ್ (Fahad Ahmad) ಇತ್ತೀಚೆಗೆ ಮಹಾರಾಷ್ಟ್ರದ ವಿಧಾನ ಸಭೆ ಚುನಾವಣೆಯಲ್ಲಿ (Maharashtra Assembly Election) ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಅವರು ಮತಯಂತ್ರದ (EVM) ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಪ್ರಧಾನಿ ಮೋದಿಗೆ (Narendra Modi) ಸವಾಲು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ಚುನಾವಣೆಯಲ್ಲಿ ಗೆದ್ದರೆ ಮುಂದಿನ 20 ವರ್ಷಗಳವರೆಗೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಚುನಾವಣೆಯ ಪಾರದರ್ಶಕತೆಯ ಬಗ್ಗೆ ಫಹಾದ್ ಅಹ್ಮದ್ ಅನುಮಾನ ವ್ಯಕ್ತ ಪಡಿಸಿದ್ದಾರೆ. ಇತ್ತೀಚೆಗೆ ಅನುಶಕ್ತಿ ನಗರ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅವರು ಮತಯಂತ್ರಗಳ ಪರಿಶೀಲನೆಗೆ ವಿನಂತಿಸುವ ಫಾರ್ಮ್‌ನ ಚಿತ್ರವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ, “ನಮ್ಮ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಕಾಪಾಡಲು ನಾನು 2 CU/BU/VVPAT ಬೂತ್‌ನ ಪರಿಶೀಲನೆಗಾಗಿ ಅರ್ಜಿ ಭರ್ತಿ ಮಾಡಿದ್ದೇನೆ. ಇದಕ್ಕಾಗಿ ಚುನಾವಣಾ ಆಯೋಗ 47,200 ರೂ.ಗಳನ್ನು ವಿಧಿಸುತ್ತಿದೆ. ನಾನೂ ಎಲ್ಲಾ 13 ಬೂತ್‌ಗಳಿಗೆ ಅರ್ಜಿ ಸಲ್ಲಿಸುತ್ತೇನೆ ಎಂದಿದ್ದಾರೆ.

ಫಹಾದ್‌ ಅಹ್ಮದ್ ಅವರ ಈ ಟ್ವೀಟ್‌ಗೆ ಕಮೆಂಟ್‌ ಮಾಡಿದ ಕೇದಾರ್‌ ಎಂಬ ನೆಟ್ಟಿಗ ನಾನು ನೀವು ಹೇಳುವುದಕ್ಕೆ ಸಮ್ಮತಿ ಸೂಚಿಸುತ್ತೇನೆ. ಇಡೀ ಕ್ಷೇತ್ರದ ಮತಗಟ್ಟೆಯಲ್ಲಿರುವ ಮತಯಂತ್ರಗಳ ಪರಿಶೀಲನೆಗೆ ನಾನು ಹಣ ನೀಡುತ್ತೇನೆ. ಮತಯಂತ್ರ ಸರಿ ಇಲ್ಲ ಅಕ್ರಮವಾಗಿದೆ ಎಂದು ನೀವು ಸಾಬೀತು ಮಾಡಿ. ಒಂದು ವೇಳೆ ಅಕ್ರಮವಲ್ಲ ಇವಿಎಂ ಸರಿ ಇದೆ ಎಂದರೆ ನಾನು ಕೊಟ್ಟ ಹಣದ ಜೊತೆಗೆ ನೀವು 25 ಲಕ್ಷ ಸೇರಿಸಿ ನೀವು ಹಿಂದಿರುಗಿಸಬೇಕಾಗುತ್ತದೆ ಎಂದು ಕಮೆಂಟ್‌ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿರುವ ಫಹಾದ್‌ “ನಿಮ್ಮ ತಂದೆ ನರೇಂದ್ರ ಮೋದಿಗೆ ಮತ ಪತ್ರಗಳ ಮೂಲಕ ಚುನಾವಣೆ ನಡೆಸಲು ಹೇಳಿ. ಒಂದು ವೇಳೆ ಅವರು ಆಗ ಗೆದ್ದರೆ ನಾನು 20 ವರ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ದೇಶ ಒಡೆಯುವವರ ಹಣದ ಅವಶ್ಯಕತೆ ನನಗಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : Swara Bhaskar: ಪತಿಗೆ ಹೀನಾಯ ಸೋಲು; EVM ಕ್ಷಮತೆ ಬಗ್ಗೆ ಸ್ವರಾ ಭಾಸ್ಕರ್‌ ಪ್ರಶ್ನೆಗಳ ಸುರಿಮಳೆ