Sunday, 11th May 2025

Fact Check: ಬರೋಬ್ಬರಿ 3 ಲಕ್ಷ ರೂ. ಮೌಲ್ಯದ ಶೂ ಧರಿಸಿದ್ರಾ ರಾಹುಲ್‌ ಗಾಂಧಿ ? ವೈರಲ್‌ ಪೋಸ್ಟ್‌ನ ಅಸಲಿಯತ್ತೇನು?

Rahul Gandhi

ಹೊಸದಿಲ್ಲಿ: ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ಸದ್ಯ ಬಿಜೆಪಿ ವಿರುದ್ದ ಪ್ರತಿಭಟನೆ ನಡೆಸುವ ಮೂಲಕ ಸದ್ದು ಮಾಡುತ್ತಿದ್ದಾರೆ. ಅವರ ವಿರುದ್ದ ದೂರೂ ದಾಖಲಾಗಿದೆ. ಈ ಮಧ್ಯೆ ಅವರು ಧರಿಸಿರುವ ಶೂ ಫೋಟೊ ವೈರಲ್‌ ಆಗಿದೆ. ರಾಹುಲ್‌ ಗಾಂಧಿ ಬರೋಬ್ಬರಿ 3 ಲಕ್ಷ ರೂ. ಬೆಲೆಬಾಳುವ ಶೂ ಧರಿಸಿದ್ದಾರೆ ಎಂದು ಹಲವರು ಸೋಶಿಯಲ್‌ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಅದಾನಿ, ಅಂಬಾನಿ ಮುಂತಾದ ಉದ್ಯಮಿಗಳನ್ನು ಸದಾ ಟೀಕಿಸುವ ರಾಹುಲ್‌ ಗಾಂಧಿ ಇಷ್ಟೊಂದು ಬೆಲೆ ಬಾಳುವ ಶೂ ಧರಿಸಿರುವ ಕ್ರಮ ಎಷ್ಟು ಸರಿ ಎನ್ನುವ ಚರ್ಚೆ ಆರಂಭವಾಗಿದೆ. ಹಾಗಾದರೆ ರಾಹುಲ್‌ ಗಾಂಧಿ ಇಷ್ಟು ದುಬಾರಿ ಶೂ ಧರಿಸಿದ್ದಾರಾ? ಈ ವೈರಲ್‌ ಸುದ್ದಿಯ ಅಸಲಿಯತ್ತೇನು? (Fact Check)

ಚಳಿಗಾಲದ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಭಾರಿ ಪ್ರತಿಭಟನೆ ನಡೆಸಿವೆ. ಸಂಸತ್ತಿನ ಹೊರಗೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಉಗ್ರ ಹೋರಾಟವನ್ನೇ ಹಮ್ಮಿಕೊಳ್ಳಲಾಗಿತ್ತು. ಅಂಬೇಡ್ಕರ್‌ ಅವರ ಸ್ಮರಣಾರ್ಥ ರಾಹುಲ್‌ ಗಾಂಧಿ ನೀಲಿ ಟೀ ಶರ್ಟ್‌ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರ ಧರಿಸಿದ ಕಂದು ಬಣ್ಣದ ಶೂ ನೆಟ್ಟಿಗರ ಗಮನ ಸೆಳೆದಿದೆ.

ರಾಹುಲ್‌ ಗಾಂಧಿ ಅವರು ಧರಿಸಿದ್ದು ಸ್ವಿಸ್‌ ಬ್ರ್ಯಾಂಡ್‌ ಆನ್‌ (On)ನ ಕ್ಲೌಡ್‌ 5 ವಾಟರ್‌ಪ್ರೂಫ್‌ ಶೂ ಆಗಿದ್ದು, ಗೂಗಲ್‌ನಲ್ಲಿ ಹುಡುಕಾಡಿದಾಗ ಇದರ ಬೆಲೆ 3 ಲಕ್ಷ ರೂ. ಎಂದು ಕಂಡು ಬಂದಿದೆ. ಹಗುರವಾಗಿರುವ ಈ ಶೂವನ್ನು ಸಾಧಾರಣವಾಗಿ ಓಟಗಾರರು ಬಳಸುತ್ತಾರೆ. ಸದ್ಯ ಈ ಬಗ್ಗೆ ಹಸಿ ಬಿಸಿ ಚರ್ಚೆ ಆರಂಭವಾಗಿದೆ. ಕೆಲವರು ಈ ಶೂವನ್ನು ಸಾವರ್ಜನಿಕ ಹಣದಿಂದ ಖರೀದಿಸಲಾಗಿದೆ ಎಂದು ದೂರಿದ್ದಾರೆ. ಗೌತಮ್‌ ಅದಾನಿ, ಮುಕೇಶ್‌ ಅಂಬಾನಿ ಅವರಂತಹ ಶ್ರೀಮಂತ ಉದ್ಯಮಿಗಳನ್ನು ಟೀಕಿಸುವ ರಾಹುಲ್‌ ಗಾಂಧಿ ದುಬಾರಿ ಶೂ ಧರಿಸಿರುವುದನ್ನು ಇನ್ನು ಕೆಲವರು ವ್ಯಂಗ್ಯವಾಡಿದ್ದಾರೆ.

ಇತ್ತ ರಾಹುಲ್‌ ಗಾಂಧಿ ಅಭಿಮಾನಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ಶೂ ಬೆಲೆ 18 ಸಾವಿರ ರೂ. ಮಾತ್ರ. ಸುಳ್ಳು ಸುದ್ದಿಯನ್ನು ಹಬಬಿಸಲಾಗುತ್ತಿದೆ ಎಂದು ದೂರಿದ್ದಾರೆ. ಸಾಧಾರನವಾಗಿ ಸಂಸದರಿಗೆ ಉತ್ತಮ ಗೌರವ ಧನ ಲಭ್ಯವಾಗುತ್ತದೆ. ಅಲ್ಲದೆ ರಾಹುಲ್‌ ಗಾಂಧಿ ಶ್ರೀಮಂತ ಕುಟುಂಬದ ಹಿನ್ನೆಲೆಯವರು. ಹೀಗಾಗಿ ಅವರು ದುಬಾರಿ ಶೂ ಧರಿಸಿರುವುದರಲ್ಲಿ ಅಚ್ಚರಿ ಇಲ್ಲ ಎಂದೂ ಕೆಲವರು ವಾದಿಸಿದ್ದಾರೆ.

ಅಸಲಿಯತ್ತೇನು?

ಇದರ ಬೆಲೆಯನ್ನು ಪರಿಶೀಲಿಸಲು ಯತ್ನಿಸಿದಾಗ ಸದ್ಯ ತಾಂತ್ರಿಕ ದೋಷದಿಂದ ಭಾರತದಲ್ಲಿ ಈ ಶೂ ಲಭ್ಯವಿಲ್ಲ ಎಂದು ಬ್ರ್ಯಾಂಡ್‌ನ ವೆಬ್‌ಸೈಟ್‌ ತಿಳಿಸಿದೆ. ಸದ್ಯ ಕಂಪೆನಿ ಸಿಂಗಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಬೆಲೆ 290 ಡಾಲರ್‌ ಎಂದು ಕಂಡು ಬಂದಿದೆ. ಅಂದರೆ ಸುಮಾರು 20 ಸಾವಿರ ರೂ. ಆದರೆ ಕೆಲವರು ರಾಹುಲ್‌ ಗಾಂಧಿ ಧರಿಸಿ ಶೂ ಮಾತ್ರ 3 ಲಕ್ಷ ರೂ. ಬೆಲೆ ಬಾಳುವಂತಹದ್ದು ಎಂದೂ ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಯೇ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ FIR