ಹೊಸದಿಲ್ಲಿ: ಭಾರತದಲ್ಲಿರುವ ನಿವೃತ್ತಿ ವಯಸ್ಸನ್ನು (Retirement age) ಹೆಚ್ಚಿಸಲಾಗುತ್ತಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಮೊದಲೇ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಇನ್ನು ನಿವೃತ್ತಿ ವಯಸ್ಸನ್ನು ಹೆಚ್ಚಿಸಿದರೆ ಈ ಸಮಸ್ಯೆ ಮಿತಿ ಮೀರಲಿದೆ ಎನ್ನುವ ಆತಂಕ ಹಲವರದ್ದು. ಹೀಗಾಗಿ ಕೆಲವರು ಈ ಬಗ್ಗೆ ಈಗಾಗಲೇ ಧ್ವನಿ ಎತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರ ಈಗಿರುವ ನಿವೃತ್ತಿ ವಯಸ್ಸನ್ನು 60 ವರ್ಷದಿಂದ ಹೆಚ್ಚಿಸಲಿದೆಯೇ? ಇದಕ್ಕೇನು ಕಾರಣ? ಹರಿದಾಡುತ್ತಿರುವ ಸುದ್ದಿಯ ಅಸಲಿಯತ್ತೇನು? ಮುಂತಾದ ಪ್ರಶ್ನೆಗೆ ಇಲ್ಲಿದೆ ಉತ್ತರ (Fact Check).
ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ ತರುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಹಲವರ ಆತಂಕವನ್ನು ನಿರಾಕರಿಸಿದೆ.
ಕೇಂದ್ರ ನೀಡಿದ ಸ್ಪಷ್ಟನೆಯಲ್ಲಿ ಏನಿದೆ?
ನಿವೃತ್ತಿ ವಯಸ್ಸಿನ ಬದಲಾವಣೆಯ ವದಂತಿಗಳನ್ನು ಕೇಂದ್ರ ಸರ್ಕಾರ ನಿವಾರಿಸಿದೆ. ಲೋಕಸಭೆಯಲ್ಲಿ ಬುಧವಾರ (ಡಿ. 4) ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಜಿತೇಂದ್ರ ಸಿಂಗ್ ಅವರು, ʼʼನಿವೃತ್ತಿ ವಯಸ್ಸು ಪ್ರಸ್ತುತ 60 ವರ್ಷ ಇದ್ದು, ಅದನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲʼʼ ಎಂದು ಹೇಳಿದ್ದಾರೆ.
ಉದ್ಯೋಗ ಪ್ರಮಾಣ ಹೆಚ್ಚಳಕ್ಕೆ ಕ್ರಮ
ʼʼನಾಗರಿಕ ಸೇವೆಗಳಲ್ಲಿ ಯುವ ಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ಹಲವು ನೀತಿಗಳು ಮತ್ತು ಉಪಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದೆ. ರೋಜ್ಗಾರ್ ಮೇಳದ ಮೂಲಕ ಖಾಲಿ ಹುದ್ದೆಗಳನ್ನು ಸಮಯೋಚಿತವಾಗಿ ಭರ್ತಿ ಮಾಡಲು ಕ್ರಮ ಕೈಗೊಂಡಿದೆʼʼ ಎಂದು ಅವರು ತಿಳಿಸಿದ್ದಾರೆ.
ʼʼಸರ್ಕಾರದ ಕಾರ್ಯಾಚರಣೆಗಳಿಗೆ ಅನುಗುಣವಾಗಿ ನಾಗರಿಕ ಸೇವಾ ಕ್ಷೇತ್ರಗಳಲ್ಲಿ ಯುವಜನತೆಗೆ ಉದ್ಯೋಗಗಳನ್ನು ಸೃಷ್ಟಿಸಲು ನೀತಿಗಳು, ಕಾರ್ಯಕ್ರಮಗಳು ಮತ್ತು ಇತರ ಉಪಕ್ರಮಗಳನ್ನು ಜಾರಿಗೊಳಿಸಲು ನಿರಂತರವಾಗಿ ಗಮನ ಹರಿಸಲಾಗುತ್ತಿದೆʼʼ ಎಂದು ಸಚಿವ ಜಿತೇಂದ್ರ ಸಿಂಗ್ ವಿವರಿಸಿದ್ದಾರೆ. ʼʼಇದಲ್ಲದೆ ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನಿಯತಕಾಲಿಕವಾಗಿ ನಿರ್ದೇಶಿಸಲಾಗುತ್ತದೆʼʼ ಎಂದು ಹೇಳಿದ್ದಾರೆ.
ರೋಜ್ಗಾರ್ ಮೇಳ
ʼʼಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು, ಇಲಾಖೆಗಳು, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಸಂಸ್ಥೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲು ರೋಜ್ಗಾರ್ ಮೇಳಗಳನ್ನು ನಡೆಸಲಾಗುತ್ತಿದೆ. ಇದು ಸಾರ್ವಜನಿಕ ಸೇವೆಗಳಲ್ಲಿ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುತ್ತಿದೆʼʼ ಎಂದು ಹೇಳಿದ್ದಾರೆ.
ಹಿರಿಯ ನಾಗರಿಕರು ಮತ್ತು ಮಾನ್ಯತೆ ಪಡೆದ ಪತ್ರಕರ್ತರಿಗೆ ಈ ಹಿಂದೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಮರುಸ್ಥಾಪಿಸುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉತ್ತರಿಸಿ, ʼʼಭಾರತ ಸರ್ಕಾರವು ಪ್ರಯಾಣಿಕರಿಗೆ ನಿಗದಿಪಡಿಸಿದ ಒಟ್ಟು ಸಬ್ಸಿಡಿ 56,993 ಕೋಟಿ ರೂ. ಪ್ರತಿ 100 ರೂ.ಗಳ ಪ್ರಯಾಣಕ್ಕೆ ಪ್ರಯಾಣಕಿಕರು 54 ರೂ. ಪಾವತಿಸಿದರೆ ಸಾಕಾಗುತ್ತದೆ. ಈ ಮೂಲಕ ಶೇ. 46ರಷ್ಟು ಸಬ್ಸಿಡಿಯನ್ನು ಪಡೆಯುತ್ತಾರೆʼʼ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: HD Devegowda: ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾ! ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಎಚ್.ಡಿ. ದೇವೇಗೌಡ