Monday, 12th May 2025

Essential Medical: ಪ್ಯಾಲಸ್ತೀನ್‌ಗೆ ಭಾರತದ ಸಹಾಯಹಸ್ತ; 30 ಟನ್ ವೈದ್ಯಕೀಯ ಸಾಮಗ್ರಿ ರವಾನೆ

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ ಭಾರತ 30 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಪ್ಯಾಲಸ್ತೀನ್‌ಗೆ ಕಳುಹಿಸಿಕೊಟ್ಟಿದೆ. ಇದರಲ್ಲಿ ಅಗತ್ಯ ಮತ್ತು ಕ್ಯಾನ್ಸರ್ ವಿರೋಧಿ ಔಷಧಗಳೂ ಸೇರಿವೆ (Essential Medical).

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, “ಪ್ಯಾಲಸ್ತೀನ್‌ ಜನರಿಗೆ ಭಾರತದ ಬೆಂಬಲ ಮುಂದುವರಿಯುತ್ತದೆ. ಅಲ್ಲಿನ ನಾಗರಿಕರಿಗೆ ಮಾನವೀಯ ನೆರವು ನೀಡಲು ಮುಂದಾಗಿದ್ದೇವೆ. ಅದರ ಭಾಗವಾಗಿ ಜೀವ ಉಳಿಸುವ ಮತ್ತು ಕ್ಯಾನ್ಸರ್ ವಿರೋಧಿ ಔಷಧಿಗಳನ್ನು ಒಳಗೊಂಡ 30 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಪ್ಯಾಲಸ್ತೀನ್‌ಗೆ ಕಳುಹಿಸುತ್ತಿದ್ದೇವೆʼʼ ಎಂದು ಬರೆದುಕೊಂಡಿದ್ದಾರೆ.

ʼʼಯುನೈಟೆಡ್‌ ನೇಷನ್ಸ್‌ ರಿಲೀಫ್‌ ಆ್ಯಂಡ್‌ ವರ್ಕ್ಸ್‌ ಏಜೆನ್ಸಿ ಫಾರ್‌ ಪ್ಯಾಲಸ್ತೀನ್‌ ರೆಫ್ಯೂಜೀಸ್‌ ಇನ್‌ ನಿಯರ್‌ ಈಸ್ಟ್‌ (UNRWA) ಮೂಲಕ ಪ್ಯಾಲಸ್ತೀನ್‌ ಜನತೆಗೆ ಸಹಾಯಹಸ್ತ ಚಾಚಲಾಗುತ್ತಿದೆʼʼ ಎಂದು ಅವರು ವಿವರಿಸಿದ್ದಾರೆ.

“30 ಟನ್ ಔಷಧಿ ಮತ್ತು ಆಹಾರ ಪದಾರ್ಥಗಳನ್ನು ಒಳಗೊಂಡ ಮೊದಲ ಕಂತಿನ ನೆರವು ಇಂದು (ಅ. 29) ಪ್ಯಾಲಸ್ತೀನ್‌ನತ್ತ ಹೊರಟಿದೆ. ಇದರಲ್ಲಿ ವ್ಯಾಪಕ ಶ್ರೇಣಿಯ ಅಗತ್ಯ ಔಷಧಿಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ದಂತ ಉತ್ಪನ್ನಗಳು, ಸಾಮಾನ್ಯ ವೈದ್ಯಕೀಯ ವಸ್ತುಗಳು ಮತ್ತು ಹೆಚ್ಚಿನ ಶಕ್ತಿಯ ಬಿಸ್ಕತ್ತುಗಳು ಸೇರಿವೆ” ಎಂದು ತಿಳಿಸಿದ್ದಾರೆ. ವಿಶೇಷವೆಂದರೆ ಇಸ್ರೇಲ್-ಪ್ಯಾಲೆಸ್ತೀನ್‌ ಸಂಘರ್ಷಕ್ಕೆ ಅಂತ್ಯ ಹಾಡಬೇಕೆಂದು ಭಾರತ ಹಿಂದಿನಿಂದಲೂ ಆಗ್ರಹಿಸುತ್ತಲೇ ಬಂದಿದೆ. 2023ರ ಅ. 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭಯಾನಕ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಮೊದಲ ಜಾಗತಿಕ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು. ಗಾಜಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಅವರು ಪದೇ ಪದೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಭಾರತವು ತನ್ನ ಬದ್ಧತೆಯ ಭಾಗವಾಗಿ ಗಾಜಾ ಜನರಿಗೆ ಮಾನವೀಯ ಸಹಾಯವನ್ನು ಕಳುಹಿಸಿ ಕೊಟ್ಟಿದೆ. ಜುಲೈನಲ್ಲಿ ಭಾರತವು ಪ್ಯಾಲಸ್ತೀನ್‌ ನಿರಾಶ್ರಿತರಿಗಾಗಿ ಯುಎನ್ಆರ್‌ಡಬ್ಲ್ಯುಎಗೆ 2.5 ಮಿಲಿಯನ್ ಡಾಲರ್‌ಗಳ ಸಹಾಯದ ಮೊದಲ ಕಂತನ್ನು ಬಿಡುಗಡೆ ಮಾಡಿತ್ತು. ಗಾಜಾದಲ್ಲಿ ಜನರು ಅಸಾಹಯಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಕಳೆದ ತಿಂಗಳು ಯುಎನ್ಆರ್‌ಡಬ್ಲ್ಯುಎ ಹೇಳಿತ್ತು.

ಕೇಂದ್ರ ಗಾಜಾದಲ್ಲಿ ತ್ಯಾಜ್ಯದ ರಾಶಿ ಸಂಗ್ರಹವಾಗುತ್ತಿದ್ದರೆ, ಒಳಚರಂಡಿ ನೀರು ಬೀದಿಗಳಿಗೆ ಸೋರಿಕೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. “ಸಂಗ್ರಹವಾದ ತ್ಯಾಜ್ಯದ ಪಕ್ಕದಲ್ಲಿ ವಾಸಿಸುವುದನ್ನು ಬಿಟ್ಟು ಕುಟುಂಬಗಳಿಗೆ ಬೇರೆ ಆಯ್ಕೆಗಳಿಲ್ಲ. ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ” ಎಂದು ಯುಎನ್ಆರ್‌ಡಬ್ಲ್ಯುಎ ಹೇಳಿದೆ.

ಸುಮಾರು ಒಂದು ವರ್ಷದ ಹಿಂದೆಯೇ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ಮಧ್ಯೆ ಯುದ್ಧ ಆರಂಭವಾಗಿದ್ದು, ಈಗಲೂ ಮುಂದುವರಿದಿದೆ. ಇಸ್ರೇಲ್ ಹಮಾಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ವರ್ಷದ ಜನವರಿಯಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್ ಉಪ ನಾಯಕ ಸಲೇಹ್ ಅಲ್-ಅರೂರಿ ಮತ್ತು ಇತರ ಆರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದರು. ಇನ್ನು ಆಗಸ್ಟ್‌ನಲ್ಲಿ ದಕ್ಷಿಣ ಲೆಬನಾನ್ ನಗರ ಸಿಡೋನ್‌ನಲ್ಲಿ ಇಸ್ರೇಲ್ ದಾಳಿ ನಡೆಸಿ ಹಮಾಸ್ ಕಮಾಂಡರ್ ಸಮೀರ್ ಅಲ್-ಹಜ್‌ನನ್ನು ಹತ್ಯೆಗೈದಿದೆ.

ಈ ಸುದ್ದಿಯನ್ನೂ ಓದಿ: Rawhi Mushtaha: ಗಾಜಾದಲ್ಲಿರುವ ಹಮಾಸ್‌ ಸರ್ಕಾರದ ಮುಖ್ಯಸ್ಥನನ್ನು ಹೊಡೆದುರುಳಿಸಿದ ಇಸ್ರೇಲ್‌