ನವದೆಹಲಿ: ಮಹಾರಾಷ್ಟ್ರ ರಾಜ್ಯದ (Maharashtra) ನೂತನ ಮುಖ್ಯಮಂತ್ರಿಯ ಹೆಸರು ಬಹುತೇಕ ಇಂದು ಘೋಷಣೆಯಾಗಬೇಕಿತ್ತು. ಆದರೆ ಏಕಾಏಕಿ ಮಹಾಯುತಿ ಸಭೆ ರದ್ದಾಗಿದೆ. ಇನ್ನು ಈ ಸಭೆಯನ್ನು ಯಾವುದೇ ಮುನ್ಸೂಚನೆಯಿಲ್ಲದೆ ರದ್ದುಗೊಳಿಸಲಾಗಿದ್ದು, ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಸತಾರಾದಲ್ಲಿರುವ ತಮ್ಮ ದರೆ(Dare) ಗ್ರಾಮಕ್ಕೆ ತೆರಳಿದ್ದಾರೆ.
ಮುಂದಿನ ಎರಡು ದಿನಗಳು ಈ ಸಭೆ ನಡೆಯುವುದಿಲ್ಲ ಎಂದು ತಿಳಿದು ಬಂದಿದೆ. ಸಭೆ ರದ್ದಾದ ಕಾರಣ ಈವರೆಗೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಬಿಜೆಪಿಯ ಬಣ ಸಿಎಂ ಯಾರೆಂಬುದನ್ನು ನಿರ್ಧರಿಸಬಹುದು, ನಂತರ ಮಹಾಮೈತ್ರಿಕೂಟ ಸಭೆ ಪ್ರಾರಂಭವಾಗಬಹುದು ಎನ್ನಲಾಗಿದೆ. ಇಂದಿನ ಸಭೆಯ ನಾಯಕತ್ವ ವಹಿಸಬೇಕಿದ್ದ ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ದಿಢೀರನೆ ಸತಾರಾದಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ನಿನ್ನೆ ಮಹಾಯುತಿ ಮೈತ್ರಿಕೂಟದ ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಅಮಿತ್ ಶಾ ಮಹಾಯುತಿಯ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿರುವ ಸಾಧ್ಯತೆಯಿದೆ ಎಂಬ ಸುದ್ದಿ ಹೊರ ಬಿದ್ದಿತ್ತು.
ಏಕನಾಥ್ ಶಿಂಧೆ ಮುಂಬೈನಲ್ಲಿ ಮಹಾಯುತಿಯ ನಾಯಕರನ್ನೊಳಗೊಂಡ ಸಭೆ ನಡೆಸಿ ನಂತರ ನೂತನ ಸಿಎಂ ಹೆಸರನ್ನು ಘೋಷಿಸಲಾಗುವುದು ಎಂದಿದ್ದರು. ಆದರೆ, ಈಗ ಈ ಸಭೆ ಇದ್ದಕ್ಕಿದ್ದಂತೆ ರದ್ದಾಗಿದೆ. ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಕುತೂಹಲಕ್ಕೆ ಸದ್ಯ ತೆರೆ ಬೀಳುವಂತೆ ಕಾಣುತ್ತಿಲ್ಲ.ಇನ್ನು ಕೆಲವು ದಿನಗಳು ಕಾಯಬೇಕಾಗಿದೆ.
ಮಹಾರಾಷ್ಟ್ರದಲ್ಲಿನ ಚುನಾವಣಾ ಫಲಿತಾಂಶ ಘೋಷಣೆಯಾಗಿ ಸುಮಾರು ಒಂದು ವಾರ ಕಳೆದಿದೆ. ಆದರೆ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಈವರೆಗೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಶುಕ್ರವಾರ ಸಂಜೆ ಮಹಾಯುತಿ ಸಭೆ ನಡೆಯಬಹುದು ಎಂದು ಹೇಳಲಾಗಿತ್ತು. ಆದರೆ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೊದಲು ಬಿಜೆಪಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ಅದರಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಮಹಾಯುತಿಯ ಜಂಟಿ ಸಭೆ ನಡೆಯಲಿದೆ. ಡಿಸೆಂಬರ್ 1 ಅಥವಾ 2 ರಂದು ದೆಹಲಿಯಿಂದ ಬರುವ ನಾಯಕರ ಸಮ್ಮುಖದಲ್ಲಿ ಸಿಎಂ ಹೆಸರು ಘೋಷಣೆಯಾಗಬಹುದು ಎಂಬ ಮಾಹಿತಿಯಿದೆ.
ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ತಮ್ಮ ನಿವಾಸದಲ್ಲಿ ಮಹಾಯುತಿ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಅಜಿತ್ ಪವಾರ್, ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಭಾಗವಹಿಸಿದ್ದರು. ಸಭೆಯ ನಂತರ, ಫಡ್ನವಿಸ್ ಅವರನ್ನು ಸಿಎಂ ಮಾಡಲು ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏಕನಾಥ್ ಶಿಂಧೆ ಅವರಿಗೂ ಪ್ರಮುಖ ಖಾತೆಗಳನ್ನು ನೀಡುವ ಮೂಲಕ ಸೂಕ್ತ ಗೌರವ ನೀಡಲಾಗುವುದೆಂದು ಬಿಜೆಪಿ ಭರವಸೆ ನೀಡಿದೆ.
ಈ ಸುದ್ದಿಯನ್ನೂ ಓದಿ: Champai Soren: ಬಿಜೆಪಿ ಸೇರ್ಪಡೆಯಾದ ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್