Monday, 12th May 2025

Eknath Shinde: ಮಹಾಯುತಿ ಸಭೆ ರದ್ದುಗೊಳಿಸಿ ಸ್ವಗ್ರಾಮಕ್ಕೆ ತೆರಳಿದ್ದ ಏಕನಾಥ್‌ ಶಿಂಧೆ ಆರೋಗ್ಯದಲ್ಲಿ ಏರುಪೇರು

Eknath Shinde

ಮುಂಬೈ: ಶನಿವಾರ ನಿಗದಿಯಾಗಿದ್ದ ಸಭೆಗಳನ್ನು ದಿಢಿರ್‌ ರದ್ದು ಮಾಡಿ ಅನಿರೀಕ್ಷಿತವಾಗಿ ಸತಾರಾ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಿದ್ದ ನಿಯೋಜಿತ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ( Eknath Shinde) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿದು ಬಂದಿದೆ.

ಶನಿವಾರ ತಮ್ಮ ಸ್ವಗ್ರಾಮದಲ್ಲಿರುವ ಮನೆಗೆ ತೆರಳಿದ್ದ ಶಿಂಧೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರ ಕುಟುಂಬ ವೈದ್ಯರಾದ ಆರ್‌ಎಂ ಪತ್ರೆ , ಶಿಂಧೆ ಅವರು ಕಳೆದ ಎರಡು ದಿನಗಳಿಂದ ಜ್ವರ, ಶೀತ ಮತ್ತು ಗಂಟಲಿನ ಸೋಂಕಿನಿಂದ ಬಳಲುತ್ತಿದ್ದಾರೆ. ಅವರಿಗೆ ಆ್ಯಂಟಿಬಯೋಟಿಕ್ಸ್ ಮತ್ತು ಸಲೈನ್ ನೀಡಲಾಗಿದ್ದು, ಒಂದು ಅಥವಾ ಎರಡು ದಿನಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವೈದ್ಯರ ನಿಗಾದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಏಕಾಏಕಿ ಮಹಾಯುತಿ (Mahayuti) ಮೈತ್ರಿಕೂಟದ ನಿಗದಿತ ಸಭೆಯನ್ನು ರದ್ದುಗೊಳಿಸಿ ಶಿಂಧೆ ಸತಾರಕ್ಕೆ ಹೋಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಮುಖ್ಯಮಂತ್ರಿ ಹುದ್ದೆಯ ವಿಚಾರವಾಗಿ ಮೈತ್ರಿಯಲ್ಲಿ ಬಿರುಕು ಏರ್ಪಟ್ಟಿದೆ ಎಂಬ ಊಹಾಪೋಹಗಳು ಸುಳಿದಾಡುತ್ತಿದ್ದವು. ಈ ಸುದ್ದಿಯನ್ನು ಬಿಜೆಪಿ ಹಾಗೂ ಶಿವಸೇನೆ ತಳ್ಳಿ ಹಾಕಿತ್ತು. ಇದೀಗ ಶಿಂಧೆ ಸಭೆಯನ್ನು ರದ್ದುಗೊಳಿಸಿದ ಕಾರಣ ಬಹಿರಂಗಗೊಂಡಿದೆ.

ಈ ನಡುವೆ ಮಹಾರಾಷ್ಟ್ರದ ಮುಖ್ಯಮಂತ್ರಿ (Maharashtra CM) ಯಾರಾಗಲಿದ್ದಾರೆ ಎಂಬ ಎಂಬ ಕೂತೂಹಲಕ್ಕೆ ತೆರೆ ಬಿದ್ದಿದೆ. ಮಹಾ ಗದ್ದುಗೆಯ ಪೈಪೋಟಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮೂಲಗಳ ಪ್ರಕಾರ ದೇವೇಂದ್ರ ಫಡ್ನವೀಸ್‌ ಮುಖ್ಯಮಂತ್ರಿಯಾಗುತ್ತಾರೆ ಎನ್ನಲಾಗುತ್ತಿದೆ. ಈ ಬಾರಿಯೂ ಎರಡು ಉಪ ಮುಖ್ಯಮಂತ್ರಿ ಪಟ್ಟ ಸೃಷ್ಟಿಯಾಗಲಿದ್ದು, ಶಿವಸೇನಾ ಹಾಗೂ ಎನ್‌ಸಿಪಿ ಪಕ್ಷ ಉಪ ಮುಖ್ಯಮಂತ್ರಿ ಪಟ್ಟ ಅಲಂಕರಿಸಬಹುದು ಎಂದು ಊಹಿಸಲಾಗಿದೆ.

ಡಿ.5ರಂದು ಸಂಜೆ 5 ಗಂಟೆಗೆ ಮುಂಬೈನ ಆಜಾದ್ ಮೈದಾನದಲ್ಲಿ ಮಹಾಯುತಿ ಮೈತ್ರಿಕೂಟದ ನೂತನ ಸರ್ಕಾರ ರಚನೆಯಾಗಲಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯಾಗಿ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಾವನ್ ಕುಲೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : PM Narendra Modi: ಮಹಾರಾಷ್ಟ್ರದ ಜನತೆ ಐತಿಹಾಸಿಕ ತೀರ್ಪು ನೀಡಿದ್ದಾರೆ: ಪಿಎಂ ನರೇಂದ್ರ ಮೋದಿ