Sunday, 11th May 2025

Eknath Shinde: ಕೊನೆಗೂ ಡಿಸಿಎಂ ಹುದ್ದೆಗೆ ಶಿಂಧೆ ಒಪ್ಪಿಗೆ; ಇಂದು ಪ್ರಮಾಣ ವಚನ

Eknath Shinde

ಮುಂಬೈ: ಇಷ್ಟು ದಿನ ಕುತೂಹಲ ಮೂಡಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ (Maharashtra CM) ಗದ್ದುಗೆ ಇದೀಗ ದೇವೇಂದ್ರ ಫಡ್ನವೀಸ್‌ಗೆ (Devendra Fadnavis) ಒಲಿದಿದ್ದು, ಬುಧವಾರ ಕೇಂದ್ರ ಬಿಜೆಪಿಯ ನಾಯಕರು ಘೋಷಣೆ ಮಾಡಿದ್ದರು. ನಂತರ ಉಪ ಮುಖ್ಯಮಂತ್ರಿಯಾಗಿ ಅಜಿತ್‌ ಪವಾರ್‌ (Ajit Pawar) ನೇಮಕವಾಗಿದ್ದು, ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಯಾಗಲಿದೆ ಎಂದು ಊಹೆ ಮಾಡಲಾಗಿತ್ತು. ಇದೀಗ ಏಕನಾಥ್ ಶಿಂಧೆ (Eknath Shinde) ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಲು ಒಪ್ಪಿಗೆ ನೀಡಿದ್ದಾರೆ ಎಂದು ಶಿವಸೇನಾ ನಾಯಕ ಉದಯ್ ಸಾಮಂತ್ ಗುರುವಾರ ತಿಳಿಸಿದ್ದಾರೆ.

ಈ ಹಿಂದೆ, ಶಿಂಧೆ ತಾಮಗೆ ಯಾವುದೇ ಸ್ಥಾನ ಬೇಡ ಎಂದು ಉಪ ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ್ದರು. ತಮ್ಮ ಪಕ್ಷದ ಶಾಸಕರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಹಾಗೂ ಸ್ಪೀಕರ್‌ ಸ್ಥಾನವನ್ನು ಕೇಳಿದಾಗ ಬಿಜೆಪಿ ನಿರಾಕರಿಸಿತ್ತು ಎನ್ನಲಾಗಿದೆ. ಅದರಿಂದ ಶಿಂಧೆ ತಮಗೆ ಯಾವುದೇ ಸ್ಥಾನ ಬೇಡವೆಂದು ಹೇಳಿದ್ದರು. ಆದರೆ ಇದೀಗ ಡಿಸಿಎಂ ಆಗಿ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ಫಡ್ನವೀಸ್‌ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಂಧೆ ಡಿಸಿಎಂ ಆಗಬೇಕೆಂಬ ಕೋರಿಕೆಯನ್ನು ದೇವೇಂದ್ರ ಫಡ್ನವೀಸ್‌ ಮಾಡಿದ್ದರು. ಆದರೆ ಆಗ ಏಕನಾಥ್‌ ಶಿಂಧೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಗುರುವಾರ ಬೆಳಗ್ಗೆ ಶಿವಸೇನೆ ಶಾಸಕರು ಶಿಂಧೆ ಅವರನ್ನು ಸಂಪುಟಕ್ಕೆ ಸೇರುವಂತೆ ಒತ್ತಾಯಿಸಿದ್ದಾರೆ ಎಂದು ಸಾಮಂತ್ ಬಹಿರಂಗಪಡಿಸಿದ್ದು, ಶಿಂಧೆ ಅವರು ಸರ್ಕಾರದ ಹೊರಗೆ ಉಳಿದರೆ ಅವರು ಸಚಿವ ಸ್ಥಾನಗಳನ್ನು ನಿರಾಕರಿಸುವುದಾಗಿ ತಿಳಿಸಿದ್ದರು ಎಂಬ ವಿಷಯವನ್ನು ಅವರು ಬಹಿರಂಗ ಪಡಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಗಿರೀಶ್ ಮಹಾಜನ್ , ಶಿಂಧೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ನಡೆಸಿದ್ದಾರೆ. ನಂತರ ಉದಯ್ ಸಾಮಂತ್ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಗಳಿಸಿದ್ದು, ಇಂದು ಮೂವರು ನಾಯಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂಬೈನ ಆಜಾದ್‌ ಮೈದಾನದಲ್ಲಿ ಸಂಜೆ 5.30 ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ : Devendra Fadnavis: ದೇವೆಂದ್ರ ಫಡ್ನವೀಸ್‌ಗೆ ʻಮಹಾʼ CM ಪಟ್ಟ; ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಅಧಿಕೃತ ಘೋಷಣೆ