Wednesday, 14th May 2025

ಪಶ್ಚಿಮ ಬಂಗಾಳದಲ್ಲಿ ’ಏಕ್ ಮುಟ್ಟಿ ಚಾವಲ್’ ಅಭಿಯಾನಕ್ಕೆ ಚಾಲನೆ

ಕೋಲ್ಕತ್ತ: ಕೇಂದ್ರ ಸರ್ಕಾರವು ರೈತ ವಿರೋಧಿ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪಿಸಿರುವ ಬೆನ್ನಲ್ಲೇ  ಪಶ್ಚಿಮ ಬಂಗಾಳದಲ್ಲಿ ‘ಏಕ್ ಮುಟ್ಟಿ ಚಾವಲ್‌’ (ಒಂದು ಹಿಡಿ ಅಕ್ಕಿ) ಅಭಿಯಾನವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ಆರಂಭಿಸಿದ್ದಾರೆ.

ಈ ವೇಳೆ ಮಾತನಾಡಿ, ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಸರ್ಕಾರವನ್ನು ರಚಿಸಲಿದ್ದೇವೆ. ಇಲ್ಲಿನ ರೈತರಿಗೆ ನಮ್ಮಿಂದ ಸಹಾಯವಾಗಲಿದೆ’ ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇ ಏರಿದ್ದು, ಜೆ.ಪಿ.ನಡ್ಡಾ ನೇತೃತ್ವದ ಅಭಿಯಾನವು ಮಹತ್ವ ಪಡೆದುಕೊಂಡಿದೆ.

ಪಕ್ಷದ ಅಧಿಕೃತ ಮಾಹಿತಿಯ ಪ್ರಕಾರ, ನಡ್ಡಾ ಅವರು ಪಶ್ಚಿಮ ಬಂಗಾಳದ ಬುರ್ದ್ವಾನ್‌ ಜಿಲ್ಲೆಯಿಂದ ಅಭಿಯಾನ ಆರಂಭಿಸ ಲಿದ್ದಾರೆ. ಪಕ್ಷದ ಕಾರ್ಯಕರ್ತರು ಈ ಅಭಿಯಾನ ಮುಂದುವರೆಸಲಿದ್ದು, 48,000 ಕೃಷಿಕರ ನಿವಾಸಗಳಿಗೆ ತೆರಳಿ ಅಕ್ಕಿಯನ್ನು ಸಂಗ್ರಹಿಸಲಿದ್ದಾರೆ.

‘ಅಕ್ಕಿಯನ್ನು ಸಂಗ್ರಹಿಸುವ ಅಭಿಯಾನವು ಒಂದು ತಿಂಗಳು ನಡೆಯಲಿದೆ. ಸಂಗ್ರಹಿಸಿದ ಅಕ್ಕಿಯನ್ನು ರೈತರಿಗೆ ಮತ್ತು ಬಡವರಿಗೆ ನೀಡಲಾಗುತ್ತದೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕವು ಹೇಳಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಂಚರಿಸುತ್ತಿದ್ದ ವಾಹನ ಮತ್ತು ಜತೆಗಿದ್ದ ವಾಹನಗಳ ಮೇಲೆ ಪಶ್ಚಿಮ ಬಂಗಾಳದ ಡೈಮಂಡ್‌ ಹಾರ್ಬರ್‌ ಪ್ರದೇಶದಲ್ಲಿ ಡಿ. 11ರಂದು ಕಲ್ಲೆಸೆಯಲಾಗಿತ್ತು. ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಟಿಎಂಸಿ ಅಲ್ಲಗಳೆದಿತ್ತು.

Leave a Reply

Your email address will not be published. Required fields are marked *