ಮನೆಗೆ ಅತಿಥಿಗಳು ಬರುತ್ತಾರೆ ಎಂದಾದರೆ ಅಥವಾ ಸಣ್ಣ ಪಾರ್ಟಿಯನ್ನು ಆಯೋಜಿಸುತ್ತಿದ್ದರೆ ಸ್ಟಾರ್ಟರ್‌ಗಳಲ್ಲಿ (chicken in starters) ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡಲಾರಂಭಿಸುತ್ತದೆ. ಚಿಕನ್ ನಿಮ್ಮ ಮೆನುವಿನಲ್ಲಿದ್ದರೆ ಡ್ರ್ಯಾಗನ್ ಚಿಕನ್ (Dragon Chicken Recipe) ಸೂಕ್ತ ಆಯ್ಕೆಯಾಗಿದೆ. ಇದನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇದಾಗಿದೆ. ಇದರ ರುಚಿ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು
ಡ್ರ್ಯಾಗನ್ ಚಿಕನ್ ತಯಾರಿಸಲು ಹೆಚ್ಚಿನ ಪದಾರ್ಥಗಳು ಬೇಕಾಗುವುದಿಲ್ಲ. ಕೆಳಗೆ ನೀಡಲಾದ ಕೆಲವು ಸಾಮಾನ್ಯ ಸಾಮಗ್ರಿಗಳಿದ್ದರೆ ಸಾಕು.
ಮೂಳೆಗಳಿಲ್ಲದ ಕೋಳಿ ಮಾಂಸ – 250 ಗ್ರಾಂ, ನುಣ್ಣಗೆ ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿ 1 ಕಪ್, ಒಣ ಮೆಣಸಿನಕಾಯಿ – 7- 8, ನುಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ 1- 2 ಟೀ ಸ್ಪೂನ್, ಸೋಯಾ ಸಾಸ್ 2 ಟೀ ಸ್ಪೂನ್, ವಿನೆಗರ್ 1 ಟೀ ಸ್ಪೂನ್, ಕರಿಮೆಣಸಿನ ಪುಡಿ – 1/2 ಟೀ ಸ್ಪೂನ್, ಕಾರ್ನ್ ಫ್ಲೋರ್ – 1 ಟೀ ಸ್ಪೂನ್, ಹುರಿದ ಕಡಲೆಕಾಯಿ – 2 ಟೀ ಸ್ಪೂನ್, ಹುರಿದ ಉದ್ದಿನಬೇಳೆ – 1 ಟೀ ಚಮಚ, ನಿಂಬೆ ರಸ – 1 ಟೀ ಸ್ಪೂನ್, ಅಗತ್ಯಕ್ಕೆ ತಕ್ಕಂತೆ ಎಣ್ಣೆ
ರುಚಿಗೆ ತಕ್ಕಂತೆ ಉಪ್ಪು ಮತ್ತು ಅಜಿನೊಮೊಟೊ.

ಮಾಡುವ ವಿಧಾನ
ಮೊದಲು ಮೂಳೆಗಳಿಲ್ಲದ ಚಿಕನ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಇದಕ್ಕೆ ಒಂದು ಚಿಟಿಕೆ ಉಪ್ಪು, ಅಜಿನೊಮೊಟೊ, ಕರಿಮೆಣಸು, ಸೋಯಾ ಸಾಸ್ ಮತ್ತು ವಿನೆಗರ್ ಸೇರಿಸಿ. ಬಳಿಕ 1 ಚಮಚ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಅನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಚಿಕನ್ ಅನ್ನು ಗೋಲ್ಡನ್ ಮತ್ತು ಗರಿಗರಿಯಾಗುವವರೆಗೆ ಡೀಪ್ ಫ್ರೈ ಮಾಡಿ. ಬಳಿಕ ಹೊರ ತೆಗೆದು ಟಿಶ್ಯೂ ಪೇಪರ್‌ನಲ್ಲಿ ಇರಿಸಿ. ಇದರಿಂದ ಹೆಚ್ಚುವರಿ ಎಣ್ಣೆ ಹೀರಲ್ಪಡುತ್ತದೆ.
ಬಳಿಕ ಡ್ರ್ಯಾಗನ್ ಚಿಕನ್ ಗ್ರೇವಿಯನ್ನು ತಯಾರಿಸಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಒಣ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ ಮತ್ತು ಲಘುವಾಗಿ ಫ್ರೈ ಮಾಡಿ. ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಇದರ ಅನಂತರ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ ಸೇರಿಸಿ ಮತ್ತು ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
ಕೊನೆಗೆ ತಯಾರಿಸಿದ ಗ್ರೇವಿಗೆ ಸ್ಪ್ರಿಂಗ್ ಆನಿಯನ್, ಹುರಿದ ಕಡಲೆಕಾಯಿ ಮತ್ತು ಉದ್ದಿನಬೇಳೆ ಸೇರಿಸಿ. ಇದಕ್ಕೆ ಹುರಿದ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಂಬೆ ರಸ ಮತ್ತು ಸ್ವಲ್ಪ ಸೋಯಾ ಸಾಸ್ ಸೇರಿಸಿ ಮತ್ತು ಮಿಶ್ರಣ ಮಾಡಿ್ದರೆ ಡ್ರ್ಯಾಗನ್ ಚಿಕನ್ ಸವಿಯಲು ಸಿದ್ಧ.
ಸ್ಪ್ರಿಂಗ್ ಆನಿಯನ್ ಮತ್ತು ಕಡಲೆಕಾಯಿ ತುಂಡುಗಳಿಂದ ಅಲಂಕರಿಸಿ ಅದನ್ನು ಉಪಾಹಾರವಾಗಿ ಅಥವಾ ಪಾರ್ಟಿ ಸ್ಟಾರ್ಟರ್ ಆಗಿ ಬಡಿಸಬಹುದು.
Health Care: ಸಲೂನ್, ಬ್ಯೂಟಿ ಪಾರ್ಲರ್‌ಗಳು ಸೋಂಕು ಹರಡುವ ತಾಣಗಳು!
ಗಮನಿಸಿ
ಡ್ರ್ಯಾಗನ್ ಚಿಕನ್ ಗರಿಗರಿಯಾಗಲು ಕಾರ್ನ್ ಫ್ಲೋರ್ ಅನ್ನು ಸರಿಯಾಗಿ ಬಳಸಿ. ಸೋಯಾ ಸಾಸ್‌ನ ಪ್ರಮಾಣ ಸರಿಯಾಗಿರಲಿ. ಇದರಿಂದ ಅದು ಹೆಚ್ಚು ಖಾರವಾಗಿರುವುದಿಲ್ಲ. ರುಚಿಗೆ ತಕ್ಕಂತೆ ಮಸಾಲೆಯನ್ನು ಪರಿಗಣಿಸಿ.