ಹೊಸದಿಲ್ಲಿ: ರೈತರು ಮತ್ತೆ ದೆಹಲಿ ಚಲೋ (Dilli Chalo) ಹಮ್ಮಿಕೊಂಡಿದ್ದಾರೆ. ಪಂಜಾಬ್ ಭಾಗದ ರೈತರು ಇಲ್ಲಿನ ಶಂಭು ಬಾರ್ಡರ್ (Shambhu border)ನಿಂದ ಇಂದು (ಡಿ. 6) ದೆಹಲಿ ಚಲೋ ಜಾಥಾ ಹಮ್ಮಿಕೊಂಡಿದ್ದಾರೆ. ರೈತರ ಈ ನಿರ್ಧಾರದ ಬೆನ್ನಲ್ಲೇ ಹರಿಯಾಣ(Haryana)ದ ಅಂಬಾಲಾ (Ambala) ಜಿಲ್ಲೆಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಮತ್ತು ಈ ಮೂಲಕ ಈ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ಸಮಾವೇಶಗೊಳ್ಳುವುದನ್ನು ತಪ್ಪಿಸುವ ಸಾಹಸಕ್ಕೆ ಜಿಲ್ಲಾಡಳಿತ ಕೈ ಹಾಕಿದೆ ಎಂದು ಪಿಟಿಐ (PTI) ಸುದ್ದಿಸಂಸ್ಥೆ ವರದಿ ಮಾಡಿದೆ.
ಶಂಭು ಗಡಿ ಮೂಲಕ ಹಾದು ಹೋಗುವ ರಾ.ಹೆ. 44 (N.H. 44)ರಲ್ಲಿ ಭಾರೀ ಟ್ರಾಫಿಕ್ ಕಾರಣದಿಂದ ವಾಹನಗಳ ಸಂಚಾರ ನಿಧಾನಗೊಂಡಿದೆ. ಈ ಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಹರಿಯಾಣ ಮತ್ತು ಪಂಜಾಬ್ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಪೊಲೀಸರು ಸಿಂಗ್ ಗಡಿಯಲ್ಲೂ ಕಟ್ಟೆಚ್ಚರ ವಹಿಸಿದ್ದಾರೆ. ಈ ಮೂಲಕ ಯಾವುದೇ ಪ್ರತಿಕೂಲ ಸನ್ನಿವೇಶಗಳನ್ನು ನಿಭಾಯಿಸಲು ಖಾಕಿ ಪಡೆ ಸಜ್ಜಾಗಿದೆ ಎಂದು ಪೊಲೀಸ್ ಮೂಲಗಳು ಸುದ್ದಿ ಸಂಸ್ಥೆಗೆ ಮಾಹಿತಿ ನಿಡಿವೆ.
ಇನ್ನೊಂದೆಡೆ, ಅಂಬಾಲದಲ್ಲಿ ಜಿಲ್ಲಾಡಳಿತ ಭಾರತೀಯ ನ್ಯಾಯ ಸಂಹಿತೆಯ (BNS) 163 ಸೆಕ್ಷನ್ ವಿಧಿಸಿದೆ. ಈ ಸೆಕ್ಷನ್‌ನಡಿಯಲ್ಲಿ ಐದು ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಜಿಂದ್‌ನಲ್ಲಿ ಸಹ ಸೆಕ್ಷನ್ 163 ವಿಧಿಸಲಾಗಿದೆ. ಈ ಭಾಗದಲ್ಲಿ ರೈತ ನಾಯಕ ಜಗ್ಜಿತ್ ಸಿಂಗ್ ದಾಲೇವಾಲ್ ನೇತೃತ್ವದಲ್ಲಿ ರೈತರು 10 ದಿನಗಳ ಆಮರಣಾಂತ ಉಪವಾಸವನ್ನು ಕೈಗೊಂಡಿದ್ದಾರೆ.
ಸುಮಾರು 100ಕ್ಕೂ ಹೆಚ್ಚು ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೆಹಲಿ ಚಲೋ ನಡೆಸಲಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಗ್ಯಾರಂಟಿ ನೀಡುವುದು, ಸಾಲ ಮನ್ನಾ, ಭೂ ಸ್ವಾಧೀನ ಮಸೂದೆಯನ್ನು ವಾಪಾಸು ಪಡೆದುಕೊಳ್ಳುವುದು ಮತ್ತು ವಿದ್ಯುತ್ ಮೇಲಿನ ಸುಂಕವನ್ನು ಏರಿಕೆ ಮಾಡದಿರುವ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ದೆಹಲಿ ಚಲೋ ನಡೆಸುತ್ತಿದ್ದಾರೆ.
ಇದನ್ನು ಓದಿ: Rajya Sabha: ಕಾಂಗ್ರೆಸ್ ಸಂಸದನ ಸೀಟ್‌ನಡಿ ಕಂತೆ ಕಂತೆ ಹಣ ಪತ್ತೆ; ಸದನದಲ್ಲಿ ತಾರಕಕ್ಕೇರಿದ ಕೋಲಾಹಲ
ಇಷ್ಟು ಮಾತ್ರವಲ್ಲದೇ, 2021ರ ಲಕ್ಷ್ಮೀಪುರ ಖೇರಿ ಹಿಂಸೆಗಳಲ್ಲಿ ಸಂತ್ರಸ್ತರಾದವರಿಗೆ ನ್ಯಾಯವನ್ನು ಆಗ್ರಹಿಸುತ್ತಿದ್ದಾರೆ ಹಾಗೂ 2020-21ರ ರೈತ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆಯೂ ಪ್ರತಿಭಟನಾ ನಿರತ ರೈತರು ಪಟ್ಟು ಹಿಡಿದಿದ್ದಾರೆ.
ಈ ಜಾಥಾವನ್ನು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯ ರಹಿತ) ನಡೆಸುತ್ತಿದ್ದು, ರೈತರ ಈ ದೆಹಲಿ ಚಲೋ ಜಾಥಾ ಇಂದು ಮಧ್ಯಾಹ್ನ ಚಾಲನೆ ಪಡೆದುಕೊಳ್ಳಲಿದೆ. ಪಂಜಾಬ್ ಭಾಗದಿಂದ ರೈತರು ದೆಹಲಿಯತ್ತ ಜಾಥಾ ಹೊರಡುತ್ತಿರುವ ಹಿನ್ನಲೆಯಲ್ಲಿ ಪಂಜಾಬ್, ಹರಿಯಾಣ ಮತ್ತು ದೆಹಲಿ ಗಡಿಭಾಗಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮಾತ್ರವಲ್ಲದೇ ಡಿಸೆಂಬರ್ 9ರವರೆಗೆ ಅಂಬಾಲ ಭಾಗದಲ್ಲಿ ಮೊಬೈಲ್ ಇಂಟರ್‌ನೆಟ್ ಹಾಗೂ ಗ್ರೂಪ್ ಮೆಸೇಜ್ ಕಳುಹಿಸುವ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಈಗಾಗಲೇ ಈ ಭಾಗದಲ್ಲಿ ಐದು ಜನಕ್ಕಿಂತ ಹೆಚ್ಚು ಗುಂಪು ಸೇರುವುದನ್ನು ನಿಷೇಧಿಸಿದ್ದಾರೆ ಹಾಗೂ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಒಂದು ದಿನದ ರಜೆಯನ್ನೂ ಘೋಷಿಸಲಾಗಿದೆ.
ಒಟ್ಟಿನಲ್ಲಿ ಮತ್ತೆ ರೈತರು ಒಟ್ಟಾಗಿ ದೆಹಲಿಯತ್ತ ಹೊರಟಿದ್ದು, ಅವರ ಬೇಡಿಕೆಗಳಿಗೆ ಸಂಬಂಧಿಸಿದ ಸರಕಾರಗಳು ಹೇಗೆ ಸ್ಪಂದಿಸಲಿವೆ ಎಂದು ಕಾದು ನೋಡಬೇಕಿದೆ.