ಮುಂಬೈ: ದೇಶದಲ್ಲಿ ದಿನೇ ದಿನ ಸೈಬರ್ ಕ್ರೈಂ (Cyber Crime) ಪ್ರಕರಣಗಳು ಹೆಚ್ಚಾಗಿದ್ದು, ಮುಂಬೈನಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈನ 26 ವರ್ಷದ ಮಹಿಳೆಗೆ ದೆಹಲಿ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು ಆಕೆಯನ್ನು ಬಲವಂತವಾಗಿ ವಿಡಿಯೋ ಕಾಲ್‌ನಲ್ಲಿ ವಿವಸ್ತ್ರಗೊಳಿಸಿ 1.7 ಲಕ್ಷ ರೂ. ದೋಚಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆ, ಮುಂಬೈನ ಬೋರಿವಲಿ ಪೂರ್ವದ ನಿವಾಸಿಯಾಗಿದ್ದು, ನವೆಂಬರ್ 19 ರಂದು ವಂಚಕರು ಆಕೆಯನ್ನು ಸಂಪರ್ಕಿಸಿದ್ದರು. ತಮ್ಮನ್ನು ದೆಹಲಿ ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಪ್ರಸ್ತುತ ಜೈಲಿನಲ್ಲಿರುವ ಜೆಟ್ ಏರ್‌ವೇಸ್‌ನ ಸಂಸ್ಥಾಪಕ-ಅಧ್ಯಕ್ಷ ನರೇಶ್ ಗೋಯಲ್ ಜೊತೆ ನೀವು ಸಂಪರ್ಕದಲ್ಲಿದ್ದು, ಅವರ ಜೊತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಆರೋಪಿಸಿದ್ದಾರೆ. ನಂತರ ಆಕೆಯನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಮಹಿಳೆಯ ಜೊತೆ ಫೋನ್ ಕಾಲ್ ಅಲ್ಲಿ ಮಾತನಾಡಿದ ನಂತರ ಆಕೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವಂತೆ ಸೂಚನೆ ನೀಡಿದ್ದಾರೆ. ನಂತರ ವಿಡಿಯೋ ಕಾಲ್‌ಗೆ ಬಂದ ಮಹಿಳೆಗೆ ದೇಹ ಪರಿಶೀಲನೆಯ ಅಗತ್ಯವಿದೆ ಅದಕ್ಕಾಗಿ ತಮ್ಮನ್ನು ವಿವಸ್ತ್ರಗೊಳಿಸುವಂತೆ ಹೇಳಿದ್ದಾರೆ. ಆದರೆ ಅದಕ್ಕೆ ಮಹಿಳೆ ನಿರಾಕರಿಸಿದ್ದಳು. ವಂಚಕರು ಆಕೆಯನ್ನು ಬಂಧಿಸುವುದಾಗಿ ಹೇಳಿದಾಗ ಆಕೆ ವಿವಸ್ತ್ರಗೊಂಡಿದ್ದಾಳೆ. ಆಕೆಯ ಬ್ಯಾಂಕ್ ವಿವರಗಳನ್ನು ಪರಿಶೀಲಿಸುವ ಸಲುವಾಗಿ ತಮ್ಮ ಖಾತೆಗೆ 1.78 ಲಕ್ಷ ರೂ ಹಾಕುವಂತೆ ಹೇಳಿದ್ದಾರೆ. ಅದರಂತೆ ಹಣವನ್ನು ಮಹಿಳೆ ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾಳೆ.
ನಂತರ ಘಟನೆಯ ಬಗ್ಗೆ ಅನುಮಾನಗೊಂಡ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ. ವಂಚಕರ ಮೇಲೆ ನವೆಂಬರ್ 28 ರಂದು ದೂರು ದಾಖಲಿಸಿದ್ದಾಳೆ. ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಹೆಚ್ಚಾಗಿದ್ದು, ವಂಚಕರು ಮಹಿಳೆಯರು ಹಾಗೂ ವೃದ್ದರನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡಿದ್ದಾರೆ. ತಮ್ಮನ್ನು ತಾವು ಜಾರಿ ನಿರ್ದೇಶನಾಲಯದ (ED) ಸೈಬರ್ ಅಧಿಕಾರಿಗಳು ಎಂದು ಹೇಳಿಕೊಂಡು ಮಹಿಳೆಯೊಬ್ಬರಿಗೆ 34 ಲಕ್ಷ ರೂ. ವಂಚಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ. ಅವರ ಹೆಸರಿನ ಪಾರ್ಸೆಲ್ ಅನ್ನು ಮುಂಬೈನಿಂದ ಇರಾನ್‌ಗೆ ಕಳುಹಿಸುವ ಸಂದರ್ಭದಲ್ಲಿ ಆ ಪಾರ್ಸೆಲ್ ನಮ್ಮ ಕೈಗೆ ಸಿಕ್ಕಿಬಿದ್ದಿದೆ. ನಿಮ್ಮನ್ನು ಈಗಲೇ ಅರೆಸ್ಟ್ ಮಾಡಲಾಗುವುದು ಎಂದು ಅವರ ವಿರುದ್ಧ ವಾಟ್ಸಾಪ್ ಮೂಲಕ ಎರಡು ನೊಟೀಸ್ ಕಳುಹಿಸಿದ್ದಾರೆ. ನಂತರ ಅವರಿಗೆ ವಿಡಿಯೋ ಕಾಲ್ ಮಾಡಿ ಈ ಕೂಡಲೇ ಹಣ ಪಾವತಿಸದಿದ್ದರೆ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು. ಮಹಿಳೆ 34 ಲಕ್ಷ ರೂ. ನೀಡಿ ವಂಚನೆಗೊಳಗಾಗಿದ್ದರು.
ಈ ಸುದ್ದಿಯನ್ನೂ ಓದಿ : Cyber Crime: ಸ್ಟಾಕ್ ಮಾರ್ಕೆಟ್ ತರಬೇತಿ ನೀಡೋದಾಗಿ ನಂಬಿಸಿ 100 ಕೋಟಿ ರೂ. ಪಂಗನಾಮ! ಚೀನಾ ಪ್ರಜೆ ಅರೆಸ್ಟ್