Saturday, 17th May 2025

D Gukesh: ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್‌ಗೆ ಪ್ರಧಾನಿ ಸಹಿತ ಹಲವು ದಿಗ್ಗಜರಿಂದ ಹರಿದು ಬಂತು ಶುಭಾಶಯಗಳ ಮಹಾಪೂರ

D Gukesh

ನವದೆಹಲಿ: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನ 14ನೇ ಪಂದ್ಯದಲ್ಲಿ ಭಾರತದ ಡಿ. ಗುಕೇಶ್‌ (D Gukesh) ಚೀನಾದ ಡಿಂಗ್‌ ಲಿರಿನ್‌ ಅವರನ್ನು ಪರಾಭವಗೊಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅತೀ ಕಿರಿಯ ಚಾಂಪಿಯನ್‌ ಎನಿಸಿಕೊಂಡಿದ್ದಾರೆ. ವಿಶ್ವನಾಥನ್ ಆನಂದ್ (Viswanathan Anand) ಅವರ ನಂತರ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಗುಕೇಶ್ ಪಾತ್ರರಾಗಿದ್ದಾರೆ. 18 ವರ್ಷದಲ್ಲಿಯೇ ಈ ಸಾಧನೆಯನ್ನು ಮಾಡಿ ವಿಶ್ವದ ಅತೀ ಕಿರಿಯ ಚೆಸ್‌ ಚಾಂಪಿಯನ್‌ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಅವರ ಈ ಸಾಧನೆಗೆ ಚೆಸ್‌ ಜಗತ್ತಿನ ದಿಗ್ಗಜರು ಶುಭಾಶಯ ತಿಳಿಸಿದ್ದಾರೆ.

ಹಾಲಿ ಚಾಂಪಿಯನ್‌ ಲಿರಿನ್‌ ಜೊತೆ 13 ಪಂದ್ಯಗಳು ಡ್ರಾ ಆಗಿದ್ದವು. ಆ ಮೂಲಕ ಇಬ್ಬರು ತಲಾ 6.5 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದರು. ಗುರುವಾರ ನಡೆದ ಕೊನೆಯ ಪಂದ್ಯದಲ್ಲಿ ಲಿರಿನ್‌ ವಿರುದ್ಧ ಗುಕೇಶ್‌ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಕ್ಕಿ ಬಂದ ಆನಂದಭಾಷ್ಪ

ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಗೆಲ್ಲುತ್ತಿದ್ದಂತೆ ಗುಕೇಶ್‌ ಅವರ ಕಣ್ಣಲ್ಲಿಆನಂದಭಾಷ್ಪ ಸುರಿದಿದೆ. ಅತ್ತ ಗುಕೇಶ್‌ ಅವರ ತಂದೆ ಕೂಡ ಭಾವುಕರಾಗಿದ್ದಾರೆ.

1985ರಲ್ಲಿ 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆದ ಪ್ರಸಿದ್ಧ ಗ್ಯಾರಿ ಕಾಸ್ಪರೋವ್,  ಭಾರತೀಯ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ. ಭಾರತವು ಇಂತಹ ಪ್ರತಿಭೆಯನ್ನು ಹೊಂದಿರುವ ದೇಶವಾಗಿದೆ. ಗುಕೇಶ್‌ ಅವರ ಈ ಸಾಧನೆಯನ್ನು ನೋಡಿದರೆ ಹೆಮ್ಮೆಯೆನಿಸುತ್ತದೆ. ಆತನು ಇನ್ನೂ ಸಾಕಷ್ಟು ಸಾಧನೆ ಮಾಡಬೇಕು. ಮುಂದಿನ ಪಯಣಕ್ಕೆ ಶುಭವಾಗಲಿ ಎಂದು ಹೇಳಿದ್ದಾರೆ.

ಅಭಿನಂದನೆ ತಿಳಿಸಿದ ಆನಂದ್‌

ಗುಕೇಶ್‌ ಅವರ ಈ ಸಾಧನೆಗೆ ಅಭಿನಂದನೆ ತಿಳಿಸಿದ ಭಾರತದ ಚೆಸ್‌ ಲೆಜೆಂಡ್‌ ವಿಶ್ವನಾಥನ್‌ ಆನಂದ್‌ ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲಿ ವಿಶ್ವ ಚೆಸ್‌ ಚಾಂಪಿಯನ್‌ ಆಗಿರುವುದು ಐತಿಹಾಸಿಕ ಸಾಧನೆಯಾಗಿದೆ ಎಂದು ಬಣ್ಣಿಸಿದ್ದಾರೆ.

1991ರಲ್ಲಿ 15 ವರ್ಷಗಳ ಹಿಂದೆ ಗ್ರ್ಯಾಂಡ್‌ಮಾಸ್ಟರ್ ಆಗಿದ್ದ ಲೆಜೆಂಡರಿ ಚೆಸ್ ಆಟಗಾರ್ತಿ ಜುಡಿಟ್ ಪೋಲ್ಗರ್ ಕೂಡ ಗುಕೇಶ್‌ ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. 18 ವರ್ಷದ ಹುಡುಗ ವಿಶ್ವ ಚೆಸ್‌ ಚಾಂಪಿಯನ್‌ ಎಂದರೆ ನಂಬಲಸಾಧ್ಯ. ಈ ರೋಮಾಂಚಕ ಪಂದ್ಯವನ್ನು ನೋಡುವಾಗ ನನ್ನ ಎದೆ ಬಡಿತ ಜೋರಾಗಿತ್ತು ಎಂದು ಅಂತಿಮ ಪಂದ್ಯದ ಬಗ್ಗೆ ವಿವರಿಸಿದ್ದಾರೆ.

15ನೇ ವಯಸ್ಸಿನಲ್ಲಿ ಮಹಿಳಾ ಚೆಸ್ ಆಟಗಾರ್ತಿಯಾಗಿ ಅಗ್ರ ಶ್ರೇಯಾಂಕ ಪಡೆದ ಜುಡಿಟ್ ಅವರ ಸಹೋದರಿ ಸುಸಾನ್ ಪೋಲ್ಗರ್, ಗುಕೇಶ್ ಅವರ ಹೋರಾಟದ ಮನೋಭಾವವನ್ನು ಶ್ಲಾಘಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಎಂದು ಹೇಳಿದ್ದಾರೆ.

ಚೆಸ್‌ ಚಾಂಪಿಯನ್‌ಗೆ ಪ್ರಧಾನಿ ಅಭಿನಂದನೆ

ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಐತಿಹಾಸಿಕ ವಿಜಯ ಸಾಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಗುಕೇಶ್‌ ಅವರನ್ನು ಅಭಿನಂದಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು ಯುವ ಚಾಂಪಿಯನ್‌ನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಅವರ ಅಪ್ರತಿಮ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಅಚಲ ಸಂಕಲ್ಪದ ಫಲವಾಗಿದೆ ಎಂದು ಪ್ರಧಾನಿ ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ : D Gukesh: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಕಿರೀಟ ತೊಟ್ಟ 18 ವರ್ಷದ ಗುಕೇಶ್; ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ