Thursday, 15th May 2025

ಗ್ಯಾಂಬಿಯಾ ಪ್ರಕರಣ: ಔಷಧಿಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ..!

ನವದೆಹಲಿ: ಪಶ್ಚಿಮ ಆಫ್ರಿಕಾ ದೇಶ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮು ಹಾಗೂ ಶೀತದ ನಾಲ್ಕು ಔಷಧಿ ಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ.

ಮೇಡನ್ ಫಾರ್ಮಸ್ಯೂಟಿಕಲ್ಸ್ ಲಿಮಿಟೆಡ್ ಉತ್ಪಾದಿಸುವ ಪ್ರೊಮೆಥಝೈನ್ ಓರಲ್ ಸೊಲ್ಯೂಶನ್ ಬಿಪಿ, ಕೋಫೆಕ್ಸ್‌ನಲಿನ್ ಬೇಬಿ ಕಫ್ ಸಿರಪ್ , ಮೇಕೋಫ್ ಬೇಬಿ ಕಫ್ ಸಿರಪ್ ಮತ್ತು ಮಾಗ್ರಿಪ್ ಎನ್ ಕೋಲ್ಡ್ ಸಿರಪ್‍ ಗಳನ್ನು ರಫ್ತು ಮಾಡಲು ಮಾತ್ರ ಕಂಪನಿ ಅನುಮತಿ ಪಡೆದಿದೆ. ಕಂಪನಿ ಈ ಔಷಧಿಗಳನ್ನು ಉತ್ಪಾದಿಸಿ ಕೇವಲ ಗ್ಯಾಂಬಿಯಾಗೆ ಮಾತ್ರ ರಫ್ತು ಮಾಡುತ್ತಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

“ದೇಶದಲ್ಲಿ ಇಂಥ ಉತ್ಪನ್ನಗಳನ್ನು ಬಳಕೆಗೆ ಬಿಡುಗಡೆ ಮಾಡುವ ಮುನ್ನ ಈ ಉತ್ಪನ್ನ ಗಳನ್ನು ಗುಣಮಟ್ಟದ ಮಾನದಂಡ ಗಳಲ್ಲಿ ಆಮದು ಮಾಡಿಕೊಳ್ಳುವ ದೇಶ ಪರೀಕ್ಷೆಗೆ ಒಳಪಡಿಸುವುದು ಮತ್ತು ದೃಢಪಡಿಸುವುದು ಸಾಮಾನ್ಯ ಕ್ರಮ” ಎಂದು ಹೇಳಿಕೆ ನೀಡಿದೆ.

“ಗ್ಯಾಂಬಿಯಾದಲ್ಲಿ ಮೃತಪಟ್ಟ 66 ಮಕ್ಕಳಲ್ಲಿ ಕಂಡುಬಂದ ತೀವ್ರ ಕಿಡ್ನಿ ಗಾಯಗಳಿಗೆ ಹಾಗೂ ಈ ನಾಲ್ಕು ಶೀತ ಮತ್ತು ಕೆಮ್ಮು ಔಷಧಿಗಳಿಗೆ ಸಂಬಂಧ ಇರುವ ಸಾಧ್ಯತೆ ಇದೆ” ಎಂದು ಡಬ್ಲ್ಯುಎಚ್‍ಓ ಮುಖ್ಯಸ್ಥ ಅಧನಾಮ್ ಗೇಬ್ರಿಯಾಸಸ್ ಹೇಳಿಕೆ ನೀಡಿದ್ದರು.