Monday, 12th May 2025

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ: ನಿತಿನ್‌ ಗಡ್ಕರಿ

ಮುಂಬೈ: ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಉತ್ತರಿಸಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಗಳ ಖಾತೆ ಸಚಿವ ನಿತಿನ್‌ ಗಡ್ಕರಿ ಅವರು, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಸಿಕ್ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ಶಿವಸೇನೆಯ ಹೇಮಂತ್ ಗೋಡ್ಸೆ ಪರ ನಡೆದ ಪ್ರಚಾರ ರ‍್ಯಾಲಿಯಲ್ಲಿ  ಮಾತನಾಡಿದರು.

ʼʼಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನವನ್ನು ಯಾವ ಸರ್ಕಾರದಿಂದಲೂ ಬದಲಾಯಿಸಲು ಸಾಧ್ಯವಾಗದು. ಕಾಂಗ್ರೆಸ್ ಸಂವಿಧಾನವನ್ನು 80 ಬಾರಿ ತಿದ್ದುಪಡಿ ಮಾಡಿದೆ. ಅದರ ಹೊರತಾಗಿಯೂ, ನಾವು (ಬಿಜೆಪಿ) ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಕಾಂಗ್ರೆಸ್‌ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ” ಎಂದು ಗಡ್ಕರಿ ವಾಗ್ದಾಳಿ ನಡೆಸಿದ್ದಾರೆ.

ʼʼಸಬ್‌ ಕ ಸಾಥ್‌, ಸಬ್‌ ಕ ವಿಕಾಸ್‌ʼ ಎನ್ನುವುದು ನರೆಂದ್ರ ಮೋದಿ ನೇತೃತ್ವದ ಸರ್ಕಾರದ ಧ್ಯೇಯ ವಾಕ್ಯ. ಅದರಂತೆ ಕೇಂದ್ರ ಸರ್ಕಾರ ಸಮಾಜದ ಪ್ರತಿಯೊಬ್ಬರಿಗೂ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದೆ. ಬಡವರು, ಶೋಷಿತರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಅವರಿಗಾಗಿ ವಿವಿಧ ಯೋಜನೆಗಳನ್ನೂ ಪ್ರಕಟಿಸಲಾಗಿದೆʼʼ ಎಂದು ವಿವರಿಸಿದ್ದಾರೆ.

ʼʼನಾಸಿಕ್‌ನ ಎರಡು ಪ್ರಮುಖ ಬೆಳೆಗಳಾದ ಈರುಳ್ಳಿ ಮತ್ತು ದ್ರಾಕ್ಷಿಯ ಸಂಗ್ರಹಣೆ ಮತ್ತು ಸಂಸ್ಕರಣೆಗೆ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆʼʼ ಎಂದೂ ಸಚಿವರು ತಿಳಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಈ ಹಿಂದೆ ಆರ್‌ಎಸ್‌ಎಸ್‌ ನಾಯಕ ಮೋಹನ್ ಭಾಗವತ್ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ದಲ್ಲಿ ಬದಲಾವಣೆಗಳನ್ನು ತರುವುದಾಗಿ ಘೋಷಿಸಿದ್ದರು. ಜತೆಗೆ ಅನೇಕ ಬಿಜೆಪಿ ನಾಯಕರು ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ. ಈ ಎಲ್ಲದರ ಬಗ್ಗೆ ಪ್ರಧಾನಿ ಮೌನವಾಗಿದ್ದಾರೆʼʼ ಎಂದಿದ್ದರು.

Leave a Reply

Your email address will not be published. Required fields are marked *