Saturday, 17th May 2025

Narendra Modi: ‘ಗಾಂಧಿ ಕುಟುಂಬದಿಂದ ಸಂವಿಧಾನಕ್ಕೆ ಅವಮಾನʼ-ಕಾಂಗ್ರೆಸ್‌ ವಿರುದ್ದ ಪ್ರಧಾನಿ ಮೋದಿ ಕಿಡಿ!

"Congress will never be able to erase taint of Emergency": PM Narendra Modi's big attack in Lok Sabha

ನವದೆಹಲಿ: ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಸ್ಮರಿಸಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್‌ ಪಕ್ಷ ಹಾಗೂ ಗಾಂಧಿ ಕುಟುಂಬವನ್ನು ಕಟುವಾಗಿ ಟೀಕಿಸಿದ್ದಾರೆ. ಸಂವಿಧಾನ ರಚನೆಯಾಗಿ 25 ವರ್ಷಗಳು ಪೂರೈಸಿದ್ದಾಗ ಅಂದಿನ ಕಾಂಗ್ರೆಸ್‌ ಸರ್ಕಾರ, ತನ್ನ ವೈಯಕ್ತಿಕ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿತ್ತು, ಆ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಸಮಾಧಿ ಮಾಡಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯ ಚಳಿಗಾಲದ ಅಧಿವೇಶದಲ್ಲಿ ʻಸಂವಿಧಾನದ ಅಂಗೀಕಾರದ 75ನೇ ವಾರ್ಷಿಕೋತ್ಸವʼದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ನರೇಂದ್ರ ಮೋದಿ, “ತುರ್ತು ಪರಿಸ್ಥಿತಿಯ ಕಳಂಕವನ್ನು ಅಳಿಸಲು ಕಾಂಗ್ರೆಸ್ ಪಕ್ಷದಿಂದ ಎಂದಿಗೂ ಸಾಧ್ಯವಾಗುವುದಿಲ್ಲ. ಸಂವಿಧಾನ ರಚನೆಯಾಗಿ 25 ವರ್ಷಗಳು ಪೂರ್ಣಗೊಂಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಅದಕ್ಕೆ (ಸಂವಿಧಾನ) ಅವಮಾನವನ್ನು ಮಾಡಿತ್ತು. ತನ್ನ ವೈಯಕ್ತಿಕ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಕಾಂಗ್ರೆಸ್‌ ಸರ್ಕಾರ, ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿತ್ತು ಹಾಗೂ ಪ್ರಜಾಪ್ರಭುತ್ವಕ್ಕೆ ಅವಮಾನವನ್ನು ಮಾಡಿತ್ತು. ಇಡೀ ದೇಶವನ್ನು ಜೈಲಾಗಿ ಪರಿವರಿಸಲಾಗಿತ್ತು, ಮಾಧ್ಯಮಗಳ ಬಾಯಿಯನ್ನು ಮುಚ್ಚಲಾಗಿತ್ತು. ತುರ್ತು ಪರಿಸ್ಥಿತಿಯ ಕಳಂಕವನ್ನು ಕಾಂಗ್ರೆಸ್‌ ಎಂದಿಗೂ ಕಳೆದುಕೊಳ್ಳವುದಿಲ್ಲ,” ಎಂದು ಕಿಡಿಕಾರಿದ್ದಾರೆ.

ನೆಹರು, ಇಂದಿರಾ ಗಾಂಧಿಯನ್ನು ಟೀಕಿಸಿದ ಮೋದಿ

ಒಂದು ಕುಟುಂಬ, ಸಂವಿಧಾನವನ್ನು ಸಾಕಷ್ಟು ಬಾರಿ ಅವಮಾನಿಸಿದೆ ಎಂದು ಮಾತು ಮುಂದುವರಿಸಿದ ನರೇಂದ್ರ ಮೋದಿ, ಮಾಜಿ ಪ್ರಧಾನ ಮಂತ್ರಿ ನೆಹರು ಅವರನ್ನು ಗುರಿಯಾಗಿದರು. ದೇಶದ ಸಂವಿಂಧಾವನ್ನು ಬದಲಿಸಬೇಕೆಂದು ದೇಶದ ಎಲ್ಲಾ ಮುಖ್ಯ ಮಂತ್ರಿಗಳಿಗೆ ಅಂದು ನೆಹರು ಪತ್ರ ಬರೆದಿದ್ದರು ಎಂಬ ಸಂದರ್ಭವನ್ನು ಸ್ಮರಿಸಿಕೊಂಡರು.

“ಸಂವಿಧಾನವನ್ನು ಬದಲಿಸುವ ಬಗ್ಗೆ ಜವಾಹರಲಾಲ್ ನೆಹರು ಬಿತ್ತಿದ ಬೀಜವನ್ನು ಇಂದಿರಾ ಗಾಂಧಿ ಅನುಸರಿಸಿದರು. ರಕ್ತದ ರುಚಿ ನೋಡಿದ ಇಂದಿರಾಗಾಂಧಿ, ಅಂದು ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡು ತುರ್ತುಪರಿಸ್ಥಿತಿಯನ್ನು ಹೇರಿದ್ದರು. ಅವರು (ಇಂದಿರಾ ) ನ್ಯಾಯಾಂಗವನ್ನು ತನ್ನ ನಿಯಂತ್ರಣಕ್ಕೆ ತಂದುಕೊಳ್ಳಲು ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ನ್ಯಾಯಾಲಯಗಳ ರೆಕ್ಕೆಗಳನ್ನು ಕತ್ತರಿಸಿದ್ದರು, ” ಎಂದು ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದರು.

75 ಬಾರಿ ಕಾಂಗ್ರೆಸ್‌ ಸಂವಿಧಾನವನ್ನು ಬದಲಿಸಿದೆ: ಮೋದಿ ಆರೋಪ

“ಕಾಂಗ್ರೆಸ್‌ ಪಕ್ಷದ ಒಂದು ಕುಟುಂಬ ಸಂವಿಧಾನದ ಮೇಲೆ ನಿರಂತರ ದಾಳಿಯನ್ನು ನಡೆಸಿದೆ. ಆ ಮೂಲಕ ಸತತವಾಗಿ ಸಂವಿಧಾನದ ಆತ್ಮವನ್ನು ರಕ್ತ ಸ್ರಾವ ಮಾಡುತ್ತಲೇ ಬಂದಿದೆ. ಆರು ದಶಕಗಳಲ್ಲಿ ಕಾಂಗ್ರೆಸ್‌ ಪಕ್ಷ ಬರೋಬ್ಬರಿ 75 ಬಾರಿ ಸಂವಿಧಾನವನ್ನು ಬದಲಸಿದೆ,” ಎಂದು ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.

ಏಕತೆ ನಮ್ಮ ಮೊದಲ ಆದ್ಯತೆ

ಭಾರತದ ಏಕತೆ ಪ್ರಸ್ತುತ ಅನಿವಾರ್ಯವಾಗಿದೆ ಎಂದು ಒತ್ತಿ ಹೇಳಿದ ಪಿಎಂ ಮೋದಿ, “ನಮ್ಮ ಆದ್ಯತೆ ಭಾರತದ ಏಕತೆಯಾಗಿದೆ. ನಮ್ಮ ಸರ್ಕಾರವು ಭಾರತವನ್ನು ಒಗ್ಗೂಡಿಸಲು 370ನೇ ವಿಧಿಯನ್ನು ತೆಗೆದುಹಾಕಿದೆ,” ಎಂದು ಹೇಳಿದರು.

“ಭಾರತದಲ್ಲಿ ಆರ್ಥಿಕ ಏಕತೆ ಸಾಧಿಸುವಲ್ಲಿ ಜಿಎಸ್‌ಟಿ ಪ್ರಮುಖ ಪಾತ್ರವನ್ನು ವಹಿಸಿದೆ. ಒಂದು ದೇಶ, ಒಂದು ರೇಷನ್‌ ಬಡವರ ಶ್ರೇಯೋಭಿವೃದ್ದಿಗೆ ನೆರವಾಗಲಿದೆ. ನಾವು ಒಂದು ರಾಷ್ಟ್ರ, ಒಂದು ಆರೋಗ್ಯ ಕಾರ್ಡ್ ಅನ್ನು ಖಾತ್ರಿಪಡಿಸಿದ್ದೇವೆ. ಆಯುಷ್ಮಾನ್ ಕಾರ್ಡ್ ಬಡವರ ಆರೋಗ್ಯದ ಆದ್ಯತೆಗಳನ್ನು ಕಾಳಜಿ ವಹಿಸಿದೆ, ” ಎಂದು ಅವರು ತಿಳಿಸಿದ್ದಾರೆ.

“ಈ ಹಿಂದೆ ಹಲವು ಬಾರಿ ದೇಶದ ಒಂದು ಭಾಗದಲ್ಲಿ ಬೆಳಕು ಕಾಣಿಸುತ್ತಿದ್ದರೆ, ಮತ್ತೊಂದು ಭಾಗದಲ್ಲಿ ಕತ್ತಲು ಆವರಿಸುತ್ತಿತ್ತು. ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಶೀರ್ಷಿಕೆಗಳ ಮೂಲಕ ಭಾರತವನ್ನು ಪ್ರಪಂಚದ ಮುಂದೆ ಮಾನಹಾನಿ ಮಾಡಿರುವುದನ್ನು ನಾವು ನೋಡಿದ್ದೇವೆ,” ಎಂದು ಅವರು ದೂರಿದ್ದಾರೆ.

“ಈ ಕಾರಣದಿಂದಲೇ ಏಕತೆಯ ಮಂತ್ರದೊಂದಿಗೆ ಮತ್ತು ಸಂವಿಧಾನದ ಅರ್ಥವನ್ನು ಎತ್ತಿಹಿಡಿಯುವ ಮೂಲಕ, ನಾವು ಭಾರತದ ಎಲ್ಲಾ ಮೂಲೆಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಒಂದು ರಾಷ್ಟ್ರ ಒಂದು ಗ್ರಿಡ್ ಅನ್ನು ಪ್ರಾರಂಭಿಸಿದ್ದೇವೆ,” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Parliament Winter Session: ʻವೈವಿಧ್ಯತೆಯಲ್ಲಿ ವಿಷಬೀಜ ಬಿತ್ತುವ ಪ್ರಯತ್ನʼ-ಪ್ರಧಾನಿ ಮೋದಿ ಗುಡುಗು!