Thursday, 15th May 2025

Coast Guard: ಹಡಗು ಮುಳುಗಿ ಅಪಾಯಕ್ಕೆ ಸಿಲುಕಿದ 12 ಭಾರತೀಯ ಸಿಬ್ಬಂದಿ; ನೆರವಿಗೆ ಬಂದ ಪಾಕಿಸ್ತಾನ

ಪೋರ್‌ಬಂದರ್: ಗುಜರಾತ್‌ನ (Gujarat) ಪೋರ್‌ಬಂದರ್‌(Porbandar)ನಿಂದ ಇರಾನ್‌ನ(Iran) ಅಬ್ಬಾಸ್(Abbas) ಬಂದರಿನತ್ತ ಸಾಗುತ್ತಿದ್ದ ವಾಣಿಜ್ಯ ಹಡಗೊಂದು ಮುಳುಗಿದ್ದು,12 ಭಾರತೀಯ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ಅವರನ್ನು ಪಾಕಿಸ್ತಾನದ ನೆರವಿನೊಂದಿಗೆ ಭಾರತೀಯ ಕರಾವಳಿ(Indian coast guard) ಪಡೆ (ಐಸಿಜಿ) ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(Coast Guard)

ಉತ್ತರ ಅರಬ್ಬೀ ಸಮುದ್ರದಲ್ಲಿ ಭಾರತದ ಸಾಗರ ವ್ಯಾಪ್ತಿಯ ಹೊರಗೆ ಪಾಕಿಸ್ತಾನದ(Pakistan) ಸಾಗರ ವಲಯದಲ್ಲಿ ‘ಎಂಎಸ್‌ವಿ ಅಲ್ ಪಿರನ್‌ಪಿರ್’ ಎಂಬ ಹಡಗು ಮುಳುಗಡೆಯಾಗಿತ್ತು. ಈ ವೇಳೆ 12 ಸಿಬ್ಬಂದಿಗಳು ಅಪಾಯಕ್ಕೆ ಸಿಲುಕಿದ್ದು, ತಮ್ಮ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಬಳಿಕ ಪಾಕಿಸ್ತಾನದ ಸಾಗರ ಭದ್ರತಾ ಪಡೆ(ಪಿಎಂಎಸ್‌ಎ) ಸಹಯೋಗದಲ್ಲಿ ಭಾರತೀಯ ಕರಾವಳಿ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಸೆಂಬರ್ 4ರಂದು ಹಡಗು ಮುಳುಗಿದ್ದು, ಭಾರತೀಯ ಕರಾವಳಿ ಪಡೆಯ ‘ಸಾರ್ತಕ್’ ಹಡಗಿನ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಭಾರತೀಯ ಕರಾವಳಿ ಪಡೆ ತಿಳಿಸಿದೆ. ಡಿಸೆಂಬರ್ 2ರಂದು ವಾಣಿಜ್ಯ ಹಡಗು ಸರಕುಗಳೊಂದಿಗೆ ಪೋರ್‌ಬಂದರ್‌ನಿಂದ ಇರಾನ್‌ನತ್ತ ಹೊರಟಿತ್ತು. ಸಾಗರದ ಪ್ರಕ್ಷುಬ್ಧತೆ ಮತ್ತು ಪ್ರವಾಹಕ್ಕೆ ಸಿಲುಕಿ ಹಡಗು ಬುಧವಾರ(ಡಿ.4) ಬೆಳಗ್ಗೆ ಮುಳುಗಡೆಗೊಂಡಿದೆ. 12 ಸಿಬ್ಬಂದಿಗಳನ್ನು ರಕ್ಷಿಸಿದ್ದು, ಈಗ ಎಲ್ಲರೂ ಆರೋಗ್ಯವಾಗಿದ್ದಾರೆ ಅವರನ್ನು ಪೋರ್‌ಬಂದರ್‌ ನ ಬಂದರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಐಸಿಜಿ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಸಾಗರ ಭದ್ರತಾ ಪಡೆಯ ವಿಮಾನ ಹಾಗೂ ಎಂವಿ ಕಾಸ್ಕೊ ಗ್ಲೋರಿ ಹಡಗು ನೆರವಿಗೆ ಬಂದಿದೆ ಎಂಬ ಮಾಹಿತಿಯಿದೆ.

ನೌಕಾಪಡೆಯ ಜಲಾಂತರ್ಗಾಮಿಗೆ ಮೀನುಗಾರಿಕಾ ದೋಣಿ ಡಿಕ್ಕಿ; ಇಬ್ಬರು ದಾರುಣ ಸಾವು

ಇತ್ತೀಚೆಗಷ್ಟೇ ಗೋವಾ (Goa) ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ(Submarine) ಐಎನ್‌ಎಸ್ ಕಾರಂಜ್ (INS Karanj) ಮತ್ತು ಮೀನುಗಾರಿಕಾ ದೋಣಿ ನಡುವೆ ಡಿಕ್ಕಿ ಸಂಭವಿಸಿತ್ತು. ಪರಿಣಾಮ ಇಬ್ಬರು ಮೀನುಗಾರರು ದಾರುಣವಾಗಿ ಸಾವನ್ನಪ್ಪಿದ್ದರು. ಜಲಾಂತರ್ಗಾಮಿ ನೌಕೆಗೆ ಕೋಟ್ಯಂತರ ಮೌಲ್ಯದ ಹಾನಿ ಸಂಭವಿಸಿತ್ತು.

ಮುಂಬೈ ಪೊಲೀಸರ ಪ್ರಕಾರ, 13 ಸಿಬ್ಬಂದಿ ಮೀನುಗಾರಿಕಾ ದೋಣಿಯಲ್ಲಿದ್ದಾಗ ಡಿಕ್ಕಿ ಸಂಭವಿಸಿದ್ದು, 11 ಮಂದಿಯನ್ನು ರಕ್ಷಿಸಲಾಗಿತ್ತು. ಇಬ್ಬರು ಮೀನುಗಾರರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಘಟನೆಯ ನಂತರ ಮುಂಬೈನ ಯೆಲ್ಲೋ ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಮೀನುಗಾರರ ಮೃತ ದೇಹಗಳನ್ನು ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿತ್ತು.

ಮೀನುಗಾರಿಕಾ ಬೋಟ್‌ನ ಕ್ಯಾಪ್ಟನ್, ತಾಂಡೇಲ್ ಅವರ ನಿರ್ಲಕ್ಷ್ಯತನದಿಂದ ಸಬ್‌ಮೆರಿನ್ ನೌಕೆಯ ನೀರಿನ ಮೇಲಿರುವ ಗೋಚರ ಭಾಗಗಳನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಅವರು ಅಜಾಗರೂಕತೆಯಿಂದ ದೋಣಿಯ ವೇಗವನ್ನು ಹೆಚ್ಚಿಸಿದ್ದು ಡಿಕ್ಕಿಗೆ ಕಾರಣವಾಗಿದೆ ಎಂದು ಎಫ್‌ಐಆರ್‌ ನಲ್ಲಿ ದಾಖಲಾಗಿತ್ತು. ಬೋಟ್‌ ಕ್ಯಾಪ್ಟನ್‌ ನ ನಿರ್ಲಕ್ಷ್ಯತೆ ಭಾರೀ ಹಾನಿಯನ್ನುಂಟು ಮಾಡಿದ್ದು ಮಾತ್ರವಲ್ಲದೆ, ಇಬ್ಬರ ಸಾವಿಗೆ ಕಾರಣವಾಗಿತ್ತು. ಉಳಿದ ಸಿಬ್ಬಂದಿಗಳಿಗೂ ಗಂಭೀರ ಗಾಯಗಳಾಗಿರುವುದು ತಿಳಿದು ಬಂದಿತ್ತು. BNS (ಭಾರತೀಯ ನ್ಯಾಯ ಸಂಹಿತೆ) ಕಾಯಿದೆಯ ಸೆಕ್ಷನ್ 106(1), 125, 282, 324(3), ಮತ್ತು 324(5) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಯೆಲ್ಲೋ ಗೇಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ:Road accident: ಸೇತುವೆಯಿಂದ ಕೃಷ್ಣಾ ನದಿಗೆ ಬಿದ್ದ ಕಾರು, ಮೂವರು ಸಾವು