Monday, 12th May 2025

ಪೊಲೀಸ್, ಅರೆಸೇನಾ ಪಡೆಗಳ ಸಮಗ್ರ ಆಧುನೀಕರಣಕ್ಕೆ ಕೇಂದ್ರ ಬದ್ದ: ಸಚಿವ ಶಾ

ನವದೆಹಲಿ: ಭಯೋತ್ಪಾದನೆ, ಸೈಬರ್ ಅಪರಾಧ ಮತ್ತು ಗಡಿ ಭದ್ರತೆಗಳ ಹೊಸ ಸವಾಲುಗಳಿಗಾಗಿ ಪೊಲೀಸ್ ಮತ್ತು ಅರೆ ಸೇನಾ ಪಡೆಗಳನ್ನು ಸಮಗ್ರವಾಗಿ ಆಧುನೀಕರಣಗೊಳಿಸುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

ನವದೆಹಲಿಯ ಚಾಣುಕ್ಯಪುರಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿಂದು ಪೊಲೀಸ್ ಸಂಸ್ಮರಣಾ ದಿನಾಚರಣೆ ಪ್ರಯುಕ್ತ ಪೊಲೀಸರು ಮತ್ತು ಕೇಂದ್ರೀಯ ಸಶಸ್ತ್ರ ಪಡೆಗಳ ಯೋಧರು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪೊಲೀಸರ ಕಾರ್ಯವು ಹೊಸ ಸವಾಲುಗಳು ಮತ್ತು ನವ ಆಯಾಮಗಳನ್ನು ಎದುರಿಸುತ್ತಿದೆ. ಭಯೋ ತ್ಪಾದನೆ, ನಕಲಿ ನೋಟು, ಮಾದಕ ವಸ್ತು ನಿಯಂತ್ರಣ, ಸೈಬರ್ ಅಪರಾಧ, ಶಸ್ತ್ರಾಸ್ತ್ರ ಕಳ್ಳ ಸಾಗಣೆ, ಮಾನವ ಕಳ್ಳ ಸಾಗಣೆ ಮೊದಲಾದ ಅಪರಾಧ ಕ್ಷೇತ್ರಗಳಲ್ಲಿ ಪೊಲೀಸರು ಸವಾಲುಗಳನ್ನು ಎದುರಿಸುತ್ತಿದ್ದು, ಇವುಗಳನ್ನು ಸಮರ್ಥವಾಗಿ ನಿಭಾಯಿ ಸಲು ಪೊಲೀಸ್ ಪಡೆಯನ್ನು ಆಧುನೀಕರಣದೊಂದಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಪೊಲೀಸ್ ಪಡೆಯನ್ನು ಕಾಲಕ್ಕೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನಗಳೊಂದಿಗೆ ಉನ್ನತೀಕರಣಗೊಳಿಸುವ ಕಾರ್ಯ ನಡೆ ಯುತ್ತಿದೆ. ನಮ್ಮ ಗಡಿ ಪ್ರದೇಶಗಳನ್ನು ಉತ್ತಮ ರೀತಿಯಲ್ಲಿ ರಕ್ಷಿಸಲು ಇದು ನೆರವಾಗಲಿದೆ ಎಂದು ಶಾ ಹೇಳಿದರು.

ದೇಶದ ಆಂತರಿಕ ಮತ್ತು ಗಡಿ ಭದ್ರತೆಯಲ್ಲಿ ಪೊಲೀಸರು ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ನಿರ್ವಹಿಸುತ್ತಿರುವ ಪಾತ್ರವನ್ನು ಅಮಿತ್ ಶಾ ಪ್ರಶಂಸಿಸಿದರು.ಈವರೆಗೆ ಕರ್ತವ್ಯಕ್ಕಾಗಿ 35,398 ಪೊಲೀಸರು ಮತ್ತು ಸಿಆರ್‍ಪಿಎಫ್ ಸಿಬ್ಬಂದಿ ಪ್ರಾಣಾರ್ಪಣೆ ಮಾಡಿದ್ದಾರೆ ಎಂದು ಸ್ಮರಿಸಿದರು.

ಲಡಾಕ್‍ನಲ್ಲಿ 1959ರಲ್ಲಿ ಚೀನಾ ಸೇನಾ ಪಡೆಯ ಹಠಾತ್ ಆಕ್ರಮಣದಲ್ಲಿ ಸಿಆರ್‍ಪಿಎಫ್‍ನ 10 ಯೋಧರು ಹುತಾತ್ಮರಾದರು. ಅವರ ಗೌರವಾರ್ಥ ಪ್ರತಿ ವರ್ಷ ಅ.21ರಂದು ಪೊಲೀಸ್ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಈಗ ಲಡಾಕ್‍ನಲ್ಲಿ ಭಾರತ ಮತ್ತು ಚೀನಾ ನಡುವಣ ಗಡಿ ಸಂಘರ್ಷ ಮುಂದುವರೆದಿರುವ ಸಂದರ್ಭದಲ್ಲೇ ಪಿಎಲ್‍ಎ ಸೇನೆ ಯಿಂದ 60 ವರ್ಷಗಳ ಹಿಂದೆ ಹತರಾದ ಭಾರತದ ಪೊಲೀಸರ ಗೌರವಾರ್ಥ ಭಾರತವು ಶ್ರದ್ಧಾಂಜಲಿ ಸಲ್ಲಿಸುತ್ತದೆ.

Leave a Reply

Your email address will not be published. Required fields are marked *