Tuesday, 13th May 2025

Caucasian Shepherd: ಈ ಶ್ವಾನ ಕಾರಿಗಿಂತ ಹೆಚ್ಚು ದುಬಾರಿ! ಇದರ ತಿಂಗಳ ಖರ್ಚು ಕೇಳಿದರೆ ಶಾಕ್ ಆಗ್ತೀರ

Caucasian Shepherd

ಲಖನೌ: ಸಾಮಾನ್ಯವಾಗಿ ಕಾರುಗಳ ಬೆಲೆ ತುಂಬಾ ದುಬಾರಿಯಾಗಿರುತ್ತದೆ. ಆದರೆ ಇಲ್ಲೊಂದು ನಾಯಿಯ (Caucasian Shepherd) ಬೆಲೆ ಮಹೀಂದ್ರಾ ಎಸ್‍ಯುವಿಗಿಂತ ಅಧಿಕ ಎಂದರೆ ನಂಬುತ್ತೀರಾ? ಹೌದು, ಈ ನಾಯಿಯ ಬೆಲೆ 8 ಲಕ್ಷ ರೂ! ಅಷ್ಟೇ ಅಲ್ಲದೇ, ಅದರ ಪ್ರತಿ ತಿಂಗಳ ಖರ್ಚು 60 ಸಾವಿರ ರೂಪಾಯಿಯಂತೆ. ಇನ್ನು ಈ ನಾಯಿ ಆನಂದಿಸುವ ಐಷಾರಾಮಿ ಜೀವನ ಸಾಮಾನ್ಯ ಮನುಷ್ಯರಿಗೂ ಸಿಗುತ್ತಿಲ್ಲವಂತೆ.

ಉತ್ತರ ಪ್ರದೇಶದ ಬುಲಂದ್ಶಹರ್ ನಿವಾಸಿ ವಿನಾಯಕ್ ಪ್ರತಾಪ್ ಸಿಂಗ್ ಈ ನಾಯಿಯನ್ನು ದೆಹಲಿಯ ಪೆಟ್ ಫೆಡ್ ಇಂಡಿಯಾ ಕಾರ್ಯಕ್ರಮಕ್ಕೆ ಕರೆತಂದಿದ್ದಾರೆ. ಅಲ್ಲಿ ಈ ನಾಯಿ ಆಕರ್ಷಣೆಯ ಕೇಂದ್ರಬಿಂದುವಾಯಿತು. ಈ ನಾಯಿ ನೋಡಲು ಆಕ್ರಮಣಕಾರಿಯಾಗಿ ಕಾಣುತ್ತದೆಯಾದರೂ, ಅದರ ಗುಣ ವಿಭಿನ್ನವಾಗಿದೆಯಂತೆ. ಇದು ಬೇಗನೆ ಮನುಷ್ಯರೊಂದಿಗೆ ಹೊಂದಿಕೊಳ್ಳುತ್ತದೆ.

ಇದು ಕಕೇಸಿಯನ್ ಶೀಫರ್ಡ್‌ ನಾಯಿಯಾಗಿದ್ದು, ಇದನ್ನು ಕಕೇಸಿಯನ್ ಒವ್ಚಾರ್ಕಾ ಎಂದೂ ಕರೆಯಲಾಗುತ್ತದೆ ಎಂದು ವಿನಾಯಕ್ ಪ್ರತಾಪ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಈ ನಾಯಿಗೆ  ಥೋರ್ ಎಂದು ಹೆಸರಿಟ್ಟಿದ್ದಾರೆ. ವಿನಾಯಕ್ ಅವರು ಅದನ್ನು ಅಮೆರಿಕ ದಿಂದ ತಂದಿರುವುದಾಗಿ ತಿಳಿಸಿದ್ದಾರೆ. ಅವರ ಸಹೋದರ ಅವರಿಗೆ ಹೆಣ್ಣು ಮತ್ತು ಗಂಡು ಸೇರಿದಂತೆ ಈ ತಳಿಯ 2 ನಾಯಿಗಳನ್ನು ತಂದುಕೊಟ್ಟಿದ್ದಾರೆ. ಅವರು ಹೆಣ್ಣನ್ನು ನಾಯಿಯನ್ನು ಮನೆಯಲ್ಲಿ ಬಿಟ್ಟು ಗಂಡು ನಾಯಿಯನ್ನು  ಮಾತ್ರ ಇಲ್ಲಿಗೆ ಕರೆತಂದಿದ್ದಾರೆ. ಥೋರ್ 72 ಕೆಜಿ ತೂಕ ಮತ್ತು 75 ಸೆಂ.ಮೀ ಎತ್ತರವಿದೆ.

ಈ ಸುದ್ದಿಯನ್ನೂ ಓದಿ: ‘ಕಾಳಿ ಮಾತಾ’ ವೇಷ ಧರಿಸಿ ಪಾನಿಪುರಿ ತಿಂದ ಮಹಿಳೆ; ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಗರಂ

ಥೋರ್‌ನ ಜೀವನಶೈಲಿ ಹೀಗಿದೆ

ಥೋರ್ ದಿನಕ್ಕೆ ಮೂರು ಬಾರಿ ತಿನ್ನುತ್ತದೆಯಂತೆ. ಇದರಲ್ಲಿ ಕೋಳಿ, ಮಾಂಸ ಮತ್ತು ನಾಯಿ ಆಹಾರವಿದೆ ಎಂದು ವಿನಾಯಕ್ ಪ್ರತಾಪ್ ಸಿಂಗ್ ವಿವರಿಸಿದ್ದಾರೆ. ಪ್ರತಿದಿನ 250 ಗ್ರಾಂ ಚಿಕನ್ ಸೇವಿಸುತ್ತದೆ. ಇದರ ಶಾಂಪೂ, ವೈದ್ಯಕೀಯ ಚಿಕಿತ್ಸೆ, ಜೀವನ ವ್ಯವಸ್ಥೆ ಮತ್ತು ಒಟ್ಟಾರೆ ನಿರ್ವಹಣೆಯ ಮಾಸಿಕ ವೆಚ್ಚ 50,000 ರೂ.ಗಳಿಂದ 60,000 ರೂ.ಗಳವರೆಗೆ ಆಗುತ್ತದೆಯಂತೆ. ಬೇಸಿಗೆಯಲ್ಲಿ, ಥೋರ್‌ಗೆ ಎಸಿ ಮತ್ತು ಕೂಲರ್ ಎರಡೂ ಬೇಕಾಗುತ್ತವೆ, ಏಕೆಂದರೆ ಇದು ಭಾರತದ ಶಾಖವನ್ನು ಸಹಿಸುವುದಿಲ್ಲವಂತೆ. ಬೇಸಿಗೆಯಲ್ಲಿ, ಇದಕ್ಕೆ ದಿನಕ್ಕೆ ಮೂರು ಬಾರಿ ಸ್ನಾನ ಮಾಡಿಸಬೇಕು ಎಂದಿದ್ದಾರೆ.