Monday, 12th May 2025

Cabinet Expansion: ʼಮಹಾಯುತಿʼ ಸಚಿವ ಸಂಪುಟ ವಿಸ್ತರಣೆ; ನಾಳೆ ನೂತನ ಸಚಿವರ ಪ್ರಮಾಣ ವಚನ

ಮುಂಬೈ: ಬಿಜೆಪಿ(BJP) ನೇತೃತ್ವದ ಮಹಾರಾಷ್ಟ್ರ(Maharashtra) ಸರ್ಕಾರದ ಸಚಿವ ಸಂಪುಟ ವಿಸ್ತರಣೆ (Cabinet Expansion) ನಾಳೆ (ಡಿ.15) ನಡೆಯಲಿದೆ ಎಂದು ತಿಳಿದು ಬಂದಿದೆ. ನೂತನ ಸಚಿವರ ಪ್ರಮಾಣ ವಚನ(Oath taking Ceremony) ಕಾರ್ಯಕ್ರಮವು ನಾಗ್ಪುರದಲ್ಲಿ(Nagpur) ನಡೆಯಲಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ಸುಮಾರು 30 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯನ್ನು ಒಳಗೊಂಡಂತೆ ಗರಿಷ್ಠ 40 ಸಚಿವರ ಸಂಪುಟ ರಚನೆ ಮಾಡಲು ಅವಕಾಶವಿದೆ. ಬಿಜೆಪಿ 20-21, ಶಿವಸೇನೆ (ಶಿಂಧೆ) 11-12, ಎನ್‌ಸಿಪಿ (ಅಜಿತ್‌) 9-10 ಸಚಿವ ಸ್ಥಾನಗಳು ದೊರೆಯಲಿದ್ದು, ನಾಗ್ಪುರದ ರಾಜಭವನದಲ್ಲಿ ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಮಾಣ ವಚನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿಯಿದೆ.

ನಗರಾಭಿವೃದ್ಧಿ, ಪ್ರವಾಸೋದ್ಯಮ, ಮತ್ತು MSRDC ಯಂತಹ ಪ್ರಮುಖ ಖಾತೆಗಳು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿಯಂತ್ರಣದಲ್ಲಿ ಉಳಿಯುತ್ತವೆ ಎಂದು ಮೂಲಗಳು ತಿಳಿಸಿವೆ. ಕಳೆದ ಡಿಸೆಂಬರ್ 5ರಂದು ಮುಂಬೈನಲ್ಲಿ‌ ಮಹಾಯುತಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ,ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಿದ್ದರು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ (ಬಿಜೆಪಿ,ಶಿವಸೇನೆ,ಎನ್‌ಸಿಪಿ) ಮೈತ್ರಿಕೂಟ 288 ಸ್ಥಾನಗಳ ಪೈಕಿ 230ರಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಿತು. ಬಿಜೆಪಿ 132, ಶಿವಸೇನೆ (ಶಿಂಧೆ) 57 ಮತ್ತು ಎನ್‌ಸಿಪಿ(ಅಜಿತ್‌) 41 ಸ್ಥಾನಗಳನ್ನು ಪಡೆದಿದ್ದವು. ದೇವೇಂದ್ರ ಫಡ್ನವೀಸ್‌ ಅತೀ ಕಿರಿಯ ವಯಸ್ಸಿನಲ್ಲಿ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಳ್ಳತನ

ಡಿ.5ರಂದು ಮುಂಬೈನ ಆಜಾದ್‌ ಮೈದಾನದಲ್ಲಿ ನಡೆದ ಮಹಾಯುತಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರ ಚಿನ್ನದ ಆಭರಣಗಳು, ಮೊಬೈಲ್‌ ಫೋನ್‌ಗಳು ಹಾಗೂ ಹಣ ಸೇರಿದಂತೆ ಒಟ್ಟು 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಕಾರ್ಯಕ್ರಮದ ಭದ್ರತೆಗಾಗಿ 4000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಷ್ಟಾಗಿಯೂ ಕಾರ್ಯಕ್ರಮ ಮುಗಿದ ಬಳಿಕ ಮೈದಾನದ 2ನೇ ಗೇಟ್‌ ಮೂಲಕ ಜನರೆಲ್ಲರೂ ಗುಂಪಾಗಿ ಹೊರಹೋಗುತ್ತಿದ್ದ ವೇಳೆಯಲ್ಲಿ ಕಳ್ಳರು ಆಭರಣಗಳು, ಮೊಬೈಲ್‌, ಪರ್ಸ್‌ಗಳನ್ನು ಕಳ್ಳತನ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆದಿತ್ತು. ಸದ್ಯ ಯಾವುದೇ ಆರೋಪಿಗಳನ್ನು ಬಂಧಿಸಲಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ:LK Advani: ಬಿಜೆಪಿ ಭೀಷ್ಮ LK ಅಡ್ವಾಣಿ ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು