Sunday, 11th May 2025

ಬಸ್ ಕಾಲುವೆಗೆ ಉರುಳಿ ಏಳು ಜನ ಸಾವು

ಪ್ರಕಾಶಂ (ಆಂಧ್ರಪ್ರದೇಶ): ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಕಾಲುವೆಗೆ ಉರುಳಿ ಏಳು ಜನ ಸಾವನ್ನಪ್ಪಿರುವ ಘಟನೆ ಕಳೆದ ಪ್ರಕಾಶಂ ಜಿಲ್ಲೆಯ ದರ್ಶಿ ಎಂಬಲ್ಲಿ ನಡೆದಿದೆ.

ಮದುವೆ ಆರತಕ್ಷತೆಗಾಗಿ ಕಾಕಿನಾಡಕ್ಕೆ ತೆರಳಲು ಬಸ್ ಬಾಡಿಗೆಗೆ ಪಡೆದಿದ್ದರು. ಚಾಲಕ ನಿದ್ರೆಗೆ ಜಾರಿದ್ದ ಕಾರಣ ಬಸ್‌ ಕಾಲುವೆಗೆ ಉರುಳಿ ಬಿದ್ದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪೊದಿಲಿ ಗ್ರಾಮದ ಅಬ್ದುಲ್ ಅಜೀಜ್ (65), ಅಬ್ದುಲ್ ಹನಿ (60), ಶೇಖ್ ರಮೀಜ್ (48), ಮುಲ್ಲಾ ನೂರ್ಜಹಾನ್ (58), ಮುಲ್ಲಾ ಜಾನಿ ಬೇಗಂ (65), ಶೇಖ್ ಶಬೀನಾ (35) ಮತ್ತು ಶೇಖ್ ಹೀನಾ (6) ಘಟನೆಯಲ್ಲಿ ಮೃತಪಟ್ಟಿದ್ದಾರೆ. 12 ಜನರು ಗಂಭೀರವಾಗಿ ಗಾಯ ಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದ ವೇಳೆ ಬಸ್ಸಿನಲ್ಲಿ 35ರಿಂದ 40 ಜನ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಕಿನಾಡದ ಯುವಕನಿಗೆ ಪ್ರಕಾಶಂ ಜಿಲ್ಲೆಯ ಪೊಡಿಲಿ ಗ್ರಾಮದ ಸಿರಾಜ್ ಎಂಬವರ ಮಗಳ ಮದುವೆ ಸೋಮವಾರ ಪೊಡಿಲಿ ಗ್ರಾಮದಲ್ಲಿ ನೆರವೇರಿತ್ತು. ಮದುವೆ ನಂತರ ನವದಂಪತಿ ಮತ್ತು ಪೋಷಕರು ಕಾರುಗಳಲ್ಲಿ ಕಾಕಿನಾಡಕ್ಕೆ ತೆರಳಿದ್ದರು. ವಧುವಿನ ಸಂಬಂಧಿಗಳಿಗಾಗಿ ಆರ್​ಟಿಸಿ ಬಸ್​ ಬಾಡಿಗೆ ಪಡೆದು ಕಾಕಿನಾಡಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಪೊಡಿಲಿಯಿಂದ 20 ಕಿಲೋ ಮೀಟರ್ ಪ್ರಯಾಣಿಸಿದ ನಂತರ ದರ್ಶಿ ಎಂಬಲ್ಲಿ ಬಸ್ ನಿಯಂತ್ರಣ ತಪ್ಪಿ ಅಲ್ಲಿದ್ದ ಕಾಲುವೆಗೆ ಉರುಳಿಬಿದ್ದಿದೆ.

Leave a Reply

Your email address will not be published. Required fields are marked *