Sunday, 11th May 2025

71 ಸಾವಿರದ ಮಟ್ಟ ದಾಟಿದ ಬಿಎಸ್​ಇ ಸೆನ್ಸೆಕ್ಸ್​

ಮುಂಬೈ: ಬೆಳಗಿನ ವಹಿವಾಟಿನಲ್ಲಿ ಶುಕ್ರವಾರದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದ್ದು, ಬಿಎಸ್‌ಇ ಸೆನ್ಸೆಕ್ಸ್ ಮೊದಲ ಬಾರಿಗೆ 71,000 ಗಡಿ ದಾಟುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಈ ಮೂಲಕ ಹೂಡಿಕೆದಾರರು ಬೆಳಗಿನ ವಹಿವಾಟಿನಲ್ಲಿ 2 ಲಕ್ಷ ಕೋಟಿ ರೂ.ಗಳಷ್ಟು ಶ್ರೀಮಂತರಾಗಿದ್ದಾರೆ.

ಅಮೆರಿಕದ ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದ ನಂತರ ಜಾಗತಿಕ ಮಾರುಕಟ್ಟೆಗಳಲ್ಲಿನ ಆಶಾವಾದಿ ಪ್ರವೃತ್ತಿ, ಮುಂದಿನ ವರ್ಷ ದರ ಕಡಿತದ ಸಂಕೇತಗಳು ಮತ್ತು ನಿರಂತರ ವಿದೇಶಿ ನಿಧಿಯ ಒಳಹರಿವಿನಿಂದ ಭಾರತದ ಷೇರು ಮಾರುಕಟ್ಟೆಗಳು ಏರಿಕೆ ಕಂಡಿವೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 569.88 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 71,084.08 ಕ್ಕೆ ತಲುಪಿದೆ.

ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ (ಎಂಸಿಎಪಿ) ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ 357 ಲಕ್ಷ ಕೋಟಿ ರೂ.ಗೆ ತಲುಪಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮೊದಲ ಬಾರಿಗೆ 70,000 ಮಟ್ಟವನ್ನು ದಾಟಿತ್ತು.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಷೇರುಗಳ ಪೈಕಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಚ್​ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ವಿಪ್ರೋ ಮತ್ತು ಜೆಎಸ್​ಡಬ್ಲ್ಯೂ ಸ್ಟೀಲ್ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ನೆಸ್ಲೆ, ಭಾರ್ತಿ ಏರ್ಟೆಲ್, ಆಕ್ಸಿಸ್ ಬ್ಯಾಂಕ್ ಐಟಿಸಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್ ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಅಮೆರಿಕದ ಮಾರುಕಟ್ಟೆ ಗಳು ಗುರುವಾರ ಏರಿಕೆ ಕಂಡಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 3,570.07 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದಾರೆ.

ಮಾರ್ಚ್ ಅಂತ್ಯದಿಂದ ಎಂಟು ತಿಂಗಳಲ್ಲಿ ಸೆನ್ಸೆಕ್ಸ್ ಸುಮಾರು 12,400 ಅಂಕಗಳಷ್ಟು ಜಿಗಿತ ಕಂಡಿದೆ.

Leave a Reply

Your email address will not be published. Required fields are marked *