ಬದನೆ (Brinjal) ಎಂದರೆ ಮೂಗು ಮುರಿಯುವವರೇ ಹೆಚ್ಚು. ಹಾಗಂತ ಕೆಲವೊಂದು ವಿಧಾನದಲ್ಲಿ ಬದನೆ ಕಾಯಿ ಪದಾರ್ಥ (Brinjal Curry) ಮಾಡಿದರೆ ಇಷ್ಟಪಡದೇ ಇರುವವರು ಕೂಡ ಮತ್ತೆ ಮತ್ತೆ ಕೇಳಿ ತಿನ್ನುತ್ತಾರೆ. ಮನೆಯಿಂದ ಹೋಗುವಾಗ ನಿಮ್ಮ ಬಳಿ ರೆಸಿಪಿ ಕೇಳಿಕೊಂಡೇ ಹೋಗುತ್ತಾರೆ. ಅಂತಹ ಒಂದು ಬದನೆಯ ಖಾದ್ಯವೇ ಬದನೆ ಕರಿ.
ದೇಹಕ್ಕೆ ಬೇಕಾಗುವ ಅನೇಕ ಪೋಷಕಾಂಶಗಳನ್ನು ಹೊಂದಿರುವ ಬದನೆಕಾಯಿಯನ್ನು ಅತಿಥಿಗಳು ಮನೆಗೆ ಬರುವಾಗ ಆಹಾರದಲ್ಲಿ ಸೇರಿಸಿ. ಇದಕ್ಕಾಗಿ ಸ್ಟಫ್ಡ್ ಬದನೆಯನ್ನೇ ಬಳಸಿ. ಇದು ತಿನ್ನಲು ರುಚಿ ಮತ್ತು ತಯಾರಿಸಲು ಸುಲಭ. ಬದನೆ ಕರಿಗೆ ಸೇರಿಸಲಾಗುವ ರಹಸ್ಯ ಅಂಶವೆಂದರೆ ಒಣ ತೆಂಗಿನಕಾಯಿ. ಇದು ತರಕಾರಿಯ ರುಚಿಯನ್ನು ಎರಡು ಪಟ್ಟು ಹೆಚ್ಚಿಸುತ್ತದೆ. ಸ್ಟಫ್ಡ್ ಬದನೆ ಕರಿ ಮಾಡಲು ಮೊದಲು ಬದನೆಯನ್ನು ಎಕ್ಸ್ ಆಕಾರದಲ್ಲಿ ಕತ್ತರಿಸಿ ಅದರಲ್ಲಿ ಕೀಟಗಳು ಇವೆಯೇ ಎಂದು ಪರಿಶೀಲಿಸಿ ನೀರಿನಲ್ಲಿ ಹಾಕಿ.
ಅನಂತರ ಬದನೆಕಾಯಿಗೆ ಉಪ್ಪು, ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿಯ ಮಿಶ್ರಣವನ್ನು ಸೇರಿಸಿ. ಬದನೆಗಳಲ್ಲಿ ಅರ್ಧದಷ್ಟು ಮಸಾಲವನ್ನು ತುಂಬಬೇಕು. ಇದರ ಅನಂತರ ಅವುಗಳನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಯಾಕೆಂದರೆ ಅವುಗಳನ್ನು ಗ್ರೇವಿಯಲ್ಲಿ ಬೇಯಿಸಿದರೆ ಒಡೆಯಲು ಪ್ರಾರಂಭಿಸುತ್ತವೆ ಮತ್ತು ಬದನೆ ತುಂಬಾ ಮೃದುವಾಗುತ್ತವೆ.
ಬದನೆ ಚೆನ್ನಾಗಿ ಹುರಿದ ಅನಂತರ ಕತ್ತರಿಸಿದ ಶುಂಠಿ, ಒಣ ತೆಂಗಿನಕಾಯಿ ಮತ್ತು ಬೆಳ್ಳುಳ್ಳಿ ಸೇರಿಸಿ. ಇವು ಹುರಿದ ಬಳಿಕ ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೇಟೊ ಹಾಕಿ ಚೆನ್ನಾಗಿ ಹುರಿಯಿರಿ. ಈ ಮಸಾಲಾ ತುಂಬಾ ಮೃದುವಾದಾಗ ಅದನ್ನು ಗ್ಯಾಸ್ನಿಂದ ಕೆಳಗೆ ಇಳಿಸಿ ತಣ್ಣಗಾಗಿಸಿ ಮತ್ತು ಅದನ್ನು ಒರಟಾಗಿ ಮಾಡಲು ರುಬ್ಬಿಕೊಳ್ಳಿ.

ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಸಾಸಿವೆ, ಇಂಗು, ದೊಡ್ಡ ಏಲಕ್ಕಿ, ಬೇ ಎಲೆಗಳನ್ನು ಸೇರಿಸಿ ಹದಗೊಳಿಸಿ. ಅನಂತರ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಅದಕ್ಕೆ ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ ತರಕಾರಿಯು ರುಚಿಕರವಾಗಿರುತ್ತದೆ.
ಇದಕ್ಕೆ ಬೇಕಿದ್ದರೆ ಹೆಸರು ಕಾಳಿನ ಹುಡಿಯನ್ನು ಸೇರಿಸಬಹುದು. ಇದರಿಂದ ಬದನೆಕಾಯಿಯ ರುಚಿ ತುಂಬಾ ಹೆಚ್ಚುತ್ತದೆ. ಕೊಂಚ ನೀರು ಸೇರಿಸಿದರೆ ಗ್ರೇವಿ ಸಿದ್ಧವಾಗಿದೆ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅನಂತರ ಬದನೆ ಮತ್ತು ಕೆಲವು ಹಸಿರು ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
Peanut Benefits: ಚಳಿಗಾಲದ ಆಹಾರದಲ್ಲಿ ನೆಲಗಡಲೆಯನ್ನು ಸೇರಿಸಿದರೆ ಎಷ್ಟೊಂದು ಆರೋಗ್ಯ ಪ್ರಯೋಜನ!
ಈಗ ಈ ಬದನೆಕಾಯಿಗಳನ್ನು 6- 7 ನಿಮಿಷಗಳ ಕಾಲ ಬೇಯಿಸಿದರೆ ಬದನೆಕಾಯಿ ಕರಿ ಸವಿಯಲು ಸಿದ್ದ. ಇದಕ್ಕೆ ಹಸಿರು ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ. ಬಿಸಿ ಬಿಸಿಯಾಗಿ ರೊಟ್ಟಿ ಅಥವಾ ಅನ್ನದೊಂದಿಗೆ ಬಡಿಸಿ ತಿನ್ನಿ.