Sunday, 11th May 2025

Bomb Threat: ದಿಲ್ಲಿಯ ಶಾಲೆಗಳಿಗೆ ಮತ್ತೆ ಬಾಂಬ್‌ ಬೆದರಿಕೆ; ಇಮೇಲ್‌ ಮೂಲಕ ಬಂದ ಸಂದೇಶದಲ್ಲಿ ಏನಿದೆ?

Bomb Threat

ಹೊಸದಿಲ್ಲಿ: ದಿಲ್ಲಿಯ ಶಾಲೆಗಳಿಗೆ ಮತ್ತೆ ಬಾಂಬ್‌ ಬೆದರಿಕೆ ಸಂದೇಶ (Bomb Threat) ಬಂದಿದೆ. ಶುಕ್ರವಾರ (ಡಿ. 13) ಬೆಳಗ್ಗೆ ಕನಿಷ್ಠ 6 ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇಮೇಲ್‌ ಸಂದೇಶ ಬಂದಿದ್ದು, ಕೂಡಲೇ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯ ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಕೈಲಾಶ್‌ ಪೂರ್ವದಲ್ಲಿರುವ ದಿಲ್ಲಿ ಪಬ್ಲಿಕ್ ಸ್ಕೂಲ್, ಸಲ್ವಾನ್ ಸ್ಕೂಲ್, ಮಾಡರ್ನ್ ಸ್ಕೂಲ್, ಕೇಂಬ್ರಿಡ್ಜ್ ಶಾಲೆ ಸೇರಿ 6ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಇಮೇಲ್‌ನಲ್ಲಿ “ಶಾಲೆಗಳು ಆವರಣದಲ್ಲಿ ಹಲವು ಸ್ಫೋಟಕಗಳಿವೆ” ಎಂದು ಹೇಳಲಾಗಿದೆ. ರಹಸ್ಯ ಡಾರ್ಕ್‌ ವೆಬ್‌ ಗುಂಪು ಇದರ ಹಿಂದಿದೆ ಎಂದೂ ತಿಳಿಸಲಾಗಿದೆ.

“ವಿದ್ಯಾರ್ಥಿಗಳು ಶಾಲಾ ಆವರಣವನ್ನು ಪ್ರವೇಶಿಸಿದಾಗ ನೀವೆಲ್ಲರೂ ಅವರ ಬ್ಯಾಗ್‌ಗಳನ್ನು ಪರಿಶೀಲಿಸುವುದಿಲ್ಲ ಎನ್ನುವುದು ನಮಗೆ ತಿಳಿದಿದೆ. ಬಾಂಬ್‌ಗಳು ಕಟ್ಟಡಗಳನ್ನು ನಾಶಪಡಿಸುವಷ್ಟು ಮತ್ತು ಜನರಿಗೆ ಹಾನಿ ಮಾಡುವಷ್ಟು ಶಕ್ತಿಯುತವಾಗಿವೆ. ಡಿ. 13 ಮತ್ತು 14- ಎರಡೂ ದಿನಗಳಲ್ಲಿ ನಿಮ್ಮ ಶಾಲೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಲಿದೆ. ಡಿ. 14ರಂದು, ಉಲ್ಲೇಖಿಸಲಾದ ಕೆಲವು ಶಾಲೆಗಳಲ್ಲಿ ಪೋಷಕ-ಶಿಕ್ಷಕರ ಸಭೆ ಇದೆ. ಬಾಂಬ್‌ ಸ್ಫೋಟಗೊಳ್ಳಲು ಇದು ಉತ್ತಮ ಅವಕಾಶ” ಎಂದು ಇಮೇಲ್‌ನಲ್ಲಿ ಎಚ್ಚರಿಸಲಾಗಿದೆ.

ಅಧಿಕಾರಿಗಳ ದೌಡು

ಅಗ್ನಿಶಾಮಕ ಇಲಾಖೆ, ಪೊಲೀಸ್, ಬಾಂಬ್ ಪತ್ತೆ ತಂಡ ಮತ್ತು ಶ್ವಾನದಳಗಳು ಶಾಲೆಗಳಿಗೆ ಆಗಮಿಸಿ ತಪಾಸಣೆ ನಡೆಸುತ್ತಿವೆ. ಇಂದು ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಅಧಿಕಾರಿಗಳು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ವಾರದಲ್ಲಿ 2ನೇ ಬಾರಿ

ಶಾಲೆಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಬರುತ್ತಿರುವುದು ಇದು ವಾರದಲ್ಲಿ 2ನೇ ಬಾರಿ. ಡಿ. 9ರಂದು ದಿಲ್ಲಿಯ 40ಕ್ಕೂ ಹೆಚ್ಚು ಶಾಲೆಗಳಿಗೆ ಇಂತಹದ್ದೇ ಹುಸಿ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು. ʼʼವಿವಿಧ ಶಾಲೆಗಳ ಕಟ್ಟಡದ ಒಳಗೆ ಬಾಂಬ್‌ಗಳನ್ನು ಇರಿಸಲಾಗಿದೆ. ಇವು ಚಿಕ್ಕ ಗಾತ್ರದಲ್ಲಿದ್ದು ಮೇಲ್ನೋಟಕ್ಕೆ ಕಾಣಿಸದಂತೆ ಹುದುಗಿಸಿ ಇಡಲಾಗಿದೆʼʼ ಎಂದು ಇಮೇಲ್‌ನಲ್ಲಿ ಎಚ್ಚರಿಸಲಾಗಿತ್ತು. ಜತೆಗೆ ಬಾಂಬ್‌ ನಿಷ್ಕ್ರೀಯಗೊಳಿಸಲು 30 ಸಾವಿರ ಡಾಲರ್‌ಗೆ ಬೇಡಿಕೆ ಇಡಲಾಗಿತ್ತು.

“ಈ ಬಾಂಬ್‌ಗಳು ಕಟ್ಟಡಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ. ಆದರೆ ಬಾಂಬ್‌ ಸ್ಫೋಟಗೊಂಡಾಗ ಅಲ್ಲಿದ್ದವರಿಗೆ ಗಾಯಗಳಾಗುವುದು ಖಚಿತ. ಕೈಕಾಲುಗಳನ್ನು ಕಳೆದುಕೊಳ್ಳುತ್ತಾರೆ” ಎಂದು ಸಂದೇಶದಲ್ಲಿ ಬೆದರಿಕೆ ಹಾಕಲಾಗಿತ್ತು. ಕೂಡಲೇ ಕ್ರಮ ಕೈಗೊಂಡ ದಿಲ್ಲಿ ಪೊಲೀಸರು ಮಕ್ಕಳನ್ನು ಮನೆಗೆ ವಾಪಸ್‌ ಕಳುಹಿಸಿದ್ದರು. ತಕ್ಷಣ ಶ್ವಾನದಳ, ಬಾಂಬ್ ಪತ್ತೆ ತಂಡ ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ಅಗ್ನಿಶಾಮಕ ಅಧಿಕಾರಿಗಳು ಶಾಲೆಗಳಿಗೆ ತಲುಪಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಬಳಿಕ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ನಿರಂತರವಾಗಿ ಬಾಂಬ್‌ ಬೆದರಿಕೆ ಸಂದೇಶ ಬರುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಈ ಸುದ್ದಿಯನ್ನೂ ಓದಿ: Hoax Bomb Threat : ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ; ನಾಗ್ಪುರ ಮೂಲದ ವ್ಯಕ್ತಿಯ ಪತ್ತೆ ಹಚ್ಚಿದ ಪೊಲೀಸರು