Saturday, 10th May 2025

Biren Singh: ಅಸ್ಸಾಂನ ಆಧಾರ್‌ ಕಾರ್ಡ್‌ ಹೊಂದಿರುವ 29 ಶಂಕಿತ ಬಾಂಗ್ಲಾದೇಶಿಯರು ಮಣಿಪುರದಲ್ಲಿ ಪತ್ತೆ

Biren Singh

ಇಂಫಾಲ: ಕೆಲವು ದಿನಗಳಿಂದ ಬಾಂಗ್ಲಾದೇಶ (Bangladesh)ದಲ್ಲಿ ಹಿಂದೂಗಳ ಮೇಲೆ, ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದೆ. ಈ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರ್ಕಾರಕ್ಕೆ ಸೂಚಿಸಿದೆ. ಈ ಮಧ್ಯೆ ಅಸ್ಸಾಂನಲ್ಲಿ ನೀಡಲಾದ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದ 29 ಶಂಕಿತ ಬಾಂಗ್ಲಾದೇಶಿಗಳನ್ನು ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ (N Biren Singh) ಸೋಮವಾರ (ಡಿ. 2) ತಿಳಿಸಿದ್ದಾರೆ.

ಈ ಬಾಂಗ್ಲಾದೇಶಿಯರು ಮಯಾಂಗ್ ಇಂಫಾಲ್ ಬೆಂಗೂನ್ ಪ್ರದೇಶದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಸಿಎಂ ಹೇಳಿದ್ದೇನು?

“ಈ 29 ಶಂಕಿತ ಬಾಂಗ್ಲಾದೇಶದವರು ಅಸ್ಸಾಂನಲ್ಲಿ ನೀಡಲಾದ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಮತ್ತು ಅನುಮಾನದ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಅವರು ಮಣಿಪುರ ಸರ್ಕಾರದ ಇನ್ನರ್ ಲೈನ್ ಪರ್ಮಿಟ್‌ (Inner Line Permit-ILP)ನ ನಿಯಮಗಳನ್ನು ಉಲ್ಲಂಘಿಸಿದ್ದಾರೆ” ಎಂದು ಬಿರೇನ್ ಸಿಂಗ್ ಹೇಳಿದ್ದಾರೆ. ಈ 29 ಮಂದಿಯನ್ನು ಮಂಗಳವಾರ ಅಸ್ಸಾಂ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ ಕಾರಣಕ್ಕೆ ಐಎಲ್‌ಪಿ ಜವಾಬ್ದಾರಿ ಹೊಂದಿರುವ ಕಂದಾಯ ಇಲಾಖೆಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದೂ ಮುಖ್ಯಮಂತ್ರಿ ಬಿರೇನ್ ಸಿಂಗ್ ವಿವರಿಸಿದ್ದಾರೆ. “ರಾಜ್ಯದ ಜನರ ರಕ್ಷಣೆಗಾಗಿ ಕೇಂದ್ರವು ಮಣಿಪುರದಲ್ಲಿ ಐಎಲ್‌ಪಿಗೆ ಅನುಮತಿ ನೀಡಿದೆ. ಅದನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಬೇಕಾದವರು ನಿರ್ಲಕ್ಷ್ಯವಹಿಸಿದ್ದು, ಅದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆʼʼ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.

“ಮಣಿಪುರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆಗೆ ಸೂಚಿಸಿದ್ದೇವೆʼʼ ಎಂದು ಅವರು ತಿಳಿಸಿದ್ದಾರೆ. ಕಾಂಗ್ಪೋಕ್ಪಿ ಜಿಲ್ಲೆಯ ಲೀಮಾಖಾಂಗ್‌ನ ಸೇನಾ ಶಿಬಿರದಿಂದ ಇತ್ತೀಚೆಗೆ ನಾಪತ್ತೆಯಾದ ಲೈಶ್ರಾಮ್ ಕಮಲ್‌ಬಾಬು ಸಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಭದ್ರತಾ ಪಡೆಗಳು ಅವರನ್ನು ಹುಡುಕುತ್ತಿವೆ. ಅವರ ಪತ್ತೆಗೆ ಸೇನೆಯು ಹೆಲಿಕಾಪ್ಟರ್ ಬಳಸುತ್ತಿದೆ. ಅವರನ್ನು ಹುಡುಕಲು ವಿವಿಧ ತಂಡಗಳನ್ನು ಕಳುಹಿಸಲಾಗಿದೆ. ಆದರೆ ಇನ್ನೂ ಅವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ” ಎಂದು ತಿಳಿಸಿದ್ದಾರೆ.

ನಾಪತ್ತೆಯಾದ ಮೈತೈ ಸಮುದಾಯದ ಲೈಶ್ರಾಮ್ ಕಮಲ್‌ಬಾಬು ಸಿಂಗ್ ಅವರ ಪತ್ನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಗುತ್ತಿಗೆ ಕೆಲಸದಲ್ಲಿ ತೊಡಗಿದ್ದ ಇಂಫಾಲದ ಪಶ್ಚಿಮದ ಲೊಯಿಟಾಂಗ್ ಖುನೌ ಗ್ರಾಮದ ನಿವಾಸಿ ಲೈಶ್ರಾಮ್ ಕಮಲ್ ಬಾಬು ಸೋಮವಾರ (ನ. 25) ಮಧ್ಯಾಹ್ನ 2 ಗಂಟೆಯಿಂದ ಲೀಮಾಖಾಂಗ್ ಸೇನಾ ಶಿಬಿರದಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ. ಕಮಲ್ ಬಾಬು ಅವರ ಪತ್ತೆಗೆ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಆದರೆ 1 ವಾರ ಕಳೆದರೂ ಸುಳಿವು ಸಿಗದಿರುವುದು ಆತಂಕ ಸೃಷ್ಟಿಸಿದೆ.

ಈ ಸುದ್ದಿಯನ್ನೂ ಓದಿ: Manipur Violence: ಸೇನಾ ಶಿಬಿರದಿಂದ ಮೈತೈ ಸಮುದಾಯದ ವ್ಯಕ್ತಿ ನಾಪತ್ತೆ; ಮಣಿಪುರ ಮತ್ತೆ ಉದ್ವಿಗ್ವ