Tuesday, 13th May 2025

ಬಿಹಾರ: ಹಿಂಸಾಚಾರ ನಿಭಾಯಿಸಲು ಹೆಚ್ಚುವರಿ ಅರೆಸೇನಾ ಪಡೆ ಜಮಾವಣೆ

ವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರದ ಘಟನೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳವಳ ವ್ಯಕ್ತಪಡಿಸಿದ್ದು, ರಾಜ್ಯಪಾಲ ಅರ್ಲೇಕರ್ ಅವರೊಂದಿಗೆ ಪರಿಸ್ಥಿತಿಯ ಮಾಹಿತಿ ಪಡೆದು ಕೊಂಡಿದ್ದಾರೆ.

ಹಿಂಸಾಚಾರದಿಂದ ಉದ್ಭವಿಸುವ ಪರಿಸ್ಥಿತಿ ನಿಭಾಯಿಸಲು ಬಿಹಾರಕ್ಕೆ ಹೆಚ್ಚುವರಿ ಅರೆಸೇನಾ ಪಡೆಗಳನ್ನು ಕಳುಹಿ ಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಬಿಹಾರ ಸರ್ಕಾರದ ಕೋರಿಕೆಯ ಮೇರೆಗೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಮನವಮಿ ಹಬ್ಬದ ಸಂದರ್ಭದಲ್ಲಿ ಸಸಾರಾಮ್ ಮತ್ತು ಬಿಹಾರ ಷರೀಫ್ ಪಟ್ಟಣಗಳಲ್ಲಿ ಕೋಮುಗಲಭೆ ಉಂಟಾಯಿತು.

ಈ ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಈವರೆಗೂ 45 ಜನರನ್ನು ಬಂಧಿಸಿದ್ದಾರೆ. ಎರಡೂ ಪಟ್ಟಣಗಳಲ್ಲಿ ವರದಿಯಾದ ಕೋಮು ಜ್ವಾಲೆಗಳಿಗೆ ವಾಹನಗಳು, ಮನೆಗಳು ಮತ್ತು ಅಂಗಡಿಗಳು ಸುಟ್ಟುಹೋಗಿವೆ, ಹಲವಾರು ಜನ ಗಾಯಗೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಮತ್ತೆ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಗೃಹ ಸಚಿವ ಶಾ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.