ನವದೆಹಲಿ: ಶ್ರೀಮಂತರಾಗಲು ಹಣವನ್ನು ಹೂಡಿಕೆ ಮಾಡುವುದು ಸರಳವಾದರೂ ಸುಲಭವಲ್ಲ ಎನ್ನುತ್ತಾರೆ ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್. ಜಗತ್ತಿನಲ್ಲೇ ಅತ್ಯಂತ ಯಶಸ್ವಿ ಹೂಡಿಕೆದಾರರಲ್ಲಿ ಇವರೂ ಒಬ್ಬರಾದ್ದರಿಂದ ಅವರ ಮಾತನ್ನು ತಳ್ಳಿ ನಿರಾಕರಿಸುವಂತಿಲ್ಲ. ಹೂಡಿಕೆ ಸುಲಭ ಏಕೆಂದರೆ, ಇದಕ್ಕಾಗಿ ನೀವು ನಿಮ್ಮಲ್ಲಿರುವ ಹಣವನ್ನು ಎಲ್ಲಾದರೂ ಇಡಬೇಕು. ಅದು ಬ್ಯಾಂಕ್ ಡೆಪಾಸಿಟ್, ಷೇರು, ಮ್ಯೂಚುವಲ್ ಫಂಡ್, ರಿಯಲ್ ಎಸ್ಟೇಟ್, ಚಿನ್ನ, ಬೆಳ್ಳಿ ಇತ್ಯಾದಿ ಆಗಿರಬಹುದು. ಹಾಗೂ ಹೂಡಿಕೆ ಮಾಡಿದ ಬಳಿಕ ಅದಕ್ಕೆ ಸಮಯದ ಬೆಲೆಯನ್ನು ಕೊಟ್ಟು ಕಾಯಬೇಕು. ಆಗ ಅದು ಮಾರುಕಟ್ಟೆಯ ರಿಸ್ಕ್ ಅನ್ನು ಆಧರಿಸಿ ಬೆಳೆಯುತ್ತದೆ(Best SIP Plans).
ಆದರೆ ಹೂಡಿಕೆ ಎನ್ನುವುದು ಕಷ್ಟವೂ ಆಗುತ್ತದೆ. ಏಕೆಂದರೆ ಸುತ್ತಮುತ್ತ ಎಲ್ಲರೂ ಹಣವನ್ನು ಖರ್ಚು ಮಾಡಿ ಜಾಲಿಯಾಗಿ ನಾನಾ ಸುಖ ಭೋಗಗಳನ್ನು ಅನುಭವಿಸುತ್ತಿರುತ್ತಾರೆ. ಅದೆಲ್ಲವೂ ಕ್ಷಣಿಕವಾಗಿ ಸುಖವನ್ನು ಕೊಡುವುದೂ ನಿಜ. ಹೀಗಾಗಿ ಅದನ್ನು ಕಂಡಾಗ ನಾನೂ ಕೈಯಲ್ಲಿರುವ ಹಣವನ್ನು ಯಾಕೆ ಖರ್ಚು ಮಾಡಿ ಖುಷಿ ಪಡಬಹುದಲ್ಲವೇ, ನಾನೇಕೆ ತ್ಯಾಗ ಮೂರ್ತಿಯಂತೆ ಇರಬೇಕು? ಎಂಬ ಆಲೋಚನೆ ತಾನಾಗಿಯೇ ಬರುತ್ತದೆ. ಇದು ಹಣವನ್ನು ಖರ್ಚು ಮಾಡಲು ಪ್ರೇರಣೆ ನೀಡುತ್ತದೆ. ಹೀಗಾಗಿ ಶಿಸ್ತಿನಿಂದ ಹಣ ಉಳಿಸಿ ಹೂಡಿಕೆ ಮಾಡಲು ಕಷ್ಟವಾಗುತ್ತದೆ. ಕುಟುಂಬದಲ್ಲಿ ಸಣ್ಣ ಮಕ್ಕಳು ಇದ್ದಾಗ ಮತ್ತು ಅವಲಂಬಿಸಿರುವ ಹಿರಿಯರು ಇದ್ದಾಗ ಹಣದ ಉಳಿತಾಯ ಮತ್ತಷ್ಟು ಸವಾಲಾಗಿ ಬಿಡುತ್ತದೆ. ಆದ್ದರಿಂದಲೇ ಸಾಧ್ಯವಾದಷ್ಟೂ ಸಣ್ಣ ವಯಸ್ಸಿನಲ್ಲಿಯೇ, ನಿಮ್ಮ ಕೈಲಾಗುವಷ್ಟು ಹಣವನ್ನು ಉಳಿತಾಯ ಮಾಡಿ ಎನ್ನುತ್ತಾರೆ ಹಣಕಾಸು ಸಲಹೆಗಾರರು.
ಹೂಡಿಕೆಗೆ ಸಂಬಂಧಿಸಿ ಹಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುವುದರಿಂದ ಸವಾಲಾಗಿ ಬಿಡುತ್ತದೆ. ಜೀವನದಲ್ಲಿ ನಿಮ್ಮ ಅಗತ್ಯಗಳು ಅಥವಾ ಅವಶ್ಯಕತೆಗಳನ್ನು ಪೂರೈಸಲೇಬೇಕಾಗುತ್ತದೆ. ಆದರೆ ಬಯಕೆಗಳನ್ನು ನಿಯಂತ್ರಿಸಬೇಕಾಗುತ್ತದೆ. ಈಗ ನೋಡಿ, ಆಹಾರ, ಬಟ್ಟೆಬರೆಗಳು, ಸ್ವಂತ ಮನೆ, ಔಷಧ, ಶಿಕ್ಷಣ, ಆರೋಗ್ಯ ವೆಚ್ಚಗಳು ಬದುಕಿನ ಅಗತ್ಯಗಳಾಗಿವೆ. ಇವುಗಳ ವಿಚಾರದಲ್ಲಿ ರಾಜಿಯಾಗಲು ಸಾಧ್ಯವಾಗುವುದಿಲ್ಲ.
ಹೀಗಿದ್ದರೂ ಹೊರಗಡೆ ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಊಟೋಪಚಾರ, ರಜಾ ದಿನಗಳಲ್ಲಿ ಜಾಲಿ ಟ್ರಿಪ್, ದುಬಾರಿ ಮೊಬೈಲ್ ಖರೀದಿ, ದುಬಾರಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ, ಲಕ್ಸುರಿ ಬಟ್ಟೆಬರೆಗಳ ಖರೀದಿ ಇತ್ಯಾದಿ ಬಯಕೆಗಳನ್ನು ಸ್ವಲ್ಪ ನಿಯಂತ್ರಿಸಬೇಕಾಗುತ್ತದೆ. ಇವುಗಳಲ್ಲೂ ಕೆಲವನ್ನು ತಪ್ಪು ಎನ್ನಲಾಗುವುದಿಲ್ಲ. ಸ್ನೇಹಿತರೊಂದಿಗೆ ಅಪರೂಪಕ್ಕೊಮ್ಮೆ ಸಿನಿಮಾ ವೀಕ್ಷಣೆ, ಕುಟುಂಬದ ಸದಸ್ಯರೊಡನೆ ಕೆಲವೊಮ್ಮೆ ಹೋಟೆಲ್, ರೆಸ್ಟೊರೆಂಟ್‌ಗೆ ಹೋಗುವುದರಿಂದ ಕೌಟುಂಂಬಿಕ ಸಂಬಂಧಗಳು ಗಟ್ಟಿಯಾಗುತ್ತವೆ. ಮನೆ ಮಂದಿಗೆ ಸಮಯ ನೀಡುವುದು ಕೂಡ ಒಳ್ಳೆಯದು. ಆದರೆ ಇದರಿಂದ ನಿಮ್ಮ ಶಿಸ್ತುಬದ್ಧ ಹೂಡಿಕೆಗೆ ತೀರಾ ಧಕ್ಕೆಯಾಗಬಾರದು.
ಹೀಗಿದ್ದರೂ, ಒಳ್ಳೆಯ ಸಂಗತಿ ಏನೆಂದರೆ, ಹೂಡಿಕೆಯನ್ನು ಆರಂಭದಲ್ಲಿ ಶಿಸ್ತುಬದ್ಧವಾಗಿ ಮಾಡಿದರೆ, ಬಳಿಕ ಅದುವೇ ಉತ್ತಮ ಅಭ್ಯಾಸ ಅಥವಾ ಹವ್ಯಾಸವಾಗುತ್ತದೆ. ಜೀವನದ ಅವಿಭಾಜ್ಯ ಅಂಶವಾಗುತ್ತದೆ. ಆದ್ದರಿಂದ ಹೂಡಿಕೆಯ ಗುರಿಯನ್ನು ಅತ್ಯಂತ ಸ್ಪಷ್ಟವಾಗಿ ಇಟ್ಟುಕೊಳ್ಳಿ. ಆಗ ಸುತ್ತುಮುತ್ತಲಿನ ಪ್ರಲೋಭನೆಗಳು, ಆಮಿಷಗಳು ನಿಮ್ಮನ್ನು ಅಡ್ಡಿಪಡಿಸುವುದಿಲ್ಲ.
ಹಾಗಾದರೆ, ಹೂಡಿಕೆ ಅಥವಾ ಇನ್ವೆಸ್ಟ್ ಮಾಡದೆ ಇರಲು ಸಾಧ್ಯವೇ? ಇದಕ್ಕೆ ಉತ್ತರ ನಿಮಗೆ ಗೊತ್ತಿರುತ್ತದೆ. ಖಂಡಿತವಾಗಿಯೂ ಜೀವನದ ಬಹು ಮುಖ್ಯ ಗುರಿಗಳನ್ನು ಸಾಧಿಸಲು ಹೂಡಿಕೆ ಬೇಕಾಗುತ್ತದೆ. ಉದಾಹರಣೆಗೆ ಸ್ವಂತ ಮನೆ, ಉನ್ನತ ಶಿಕ್ಷಣ, ವಿವಾಹ, ವಿದೇಶ ಪ್ರವಾಸ, ನಿವೃತ್ತಿಯ ಆರ್ಥಿಕ ಭದ್ರತೆ, ಆರೋಗ್ಯ ವೆಚ್ಚ ಇತ್ಯಾದಿಗಳಿಗೆ ಶಿಸ್ತುಬದ್ಧ ಹೂಡಿಕೆ ಅವಶ್ಯಕ. ಕನಿಷ್ಠ ನಿವೃತ್ತಿಯ ನಂತರದ ಬದುಕಿನ ಖರ್ಚಿಗೋಸ್ಕರವಾದರೂ ಹೂಡಿಕೆ ಬೇಕಾಗುತ್ತದೆ. ಇನ್ವೆಸ್ಟ್ ಅನ್ನು ಸಾಧ್ಯವಾದಷ್ಟೂ ಸರಿಯಾಗಿ ಇನ್ವೆಸ್ಟ್ ಮಾಡುವುದೂ ಮುಖ್ಯವಾಗುತ್ತದೆ. ಇದು ಅಷ್ಟು ಸುಲಭವಲ್ಲ. ಹೂಡಿಕೆಯ ವಿಚಾರದಲ್ಲಿ ತಪ್ಪು ನಿರ್ಧಾರಗಳಿಂದ ಮನಸ್ಸಿನ ನೆಮ್ಮದಿಯೂ ಹೋಗಬಹುದು.
ಈಗಂತೂ ಹೂಡಿಕೆಗೆ ಸಂಬಂಧಿಸಿ ಯೂಟ್ಯೂಬ್ ವಿಡಿಯೊಗಳು, ಲೇಖನಗಳು, ಪುಸ್ತಕಗಳು ಹೇರಳವಾಗಿ ಸಿಗುತ್ತವೆ. ಜತೆಗೆ ಹಣಕಾಸು ಸಲಹೆಗಾರರ ಸೇವೆಯನ್ನೂ ಪಡೆಯಬಹುದು. ಇಲ್ಲೂ ಸರಿಯಾದ ಮಾಹಿತಿ, ಮಾರ್ಗದರ್ಶನ ಮುಖ್ಯವಾಗುತ್ತದೆ. ಆದ್ದರಿಂದ ಹೂಡಿಕೆಯ ಪ್ರತಿಯೊಂದು ನಡೆಗೂ ಮುನ್ನ ಸಾಕಷ್ಟು ಅಧ್ಯಯನ, ಪರಿಶೀಲನೆ, ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.
ಈಗ ಶ್ರೀಮಂತರಾಗಲು ಹಣವನ್ನು ಹೇಗೆ ಹೂಡಿಕೆ ಮಾಡಬೇಕು ಎಂಬುದನ್ನು ನೋಡೋಣ. ನೀವು ಪ್ರತಿ ತಿಂಗಳು 1000 ರೂ.ಗಳಿಂದಲೂ ಹೂಡಿಕೆಯನ್ನು ಆರಂಭಿಸಬಹುದು. ಮೊದಲನೆಯದಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳು 1,000 ರೂ.ಗಳಿಂದ ಹೂಡಿಕೆಯನ್ನು ಆರಂಭಿಸಬಹುದು. ಇದನ್ನು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಎನ್ನುತ್ತಾರೆ.
ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಕಾಲೀನ ಹೂಡಿಕೆಯಿಂದ ಹೆಚ್ಚಿನ ಆದಾಯ ಗಳಿಸಬಹುದು. ಇದಕ್ಕೆ ಕಾರಣ ನೀವು ಇಲ್ಲಿ ಗಳಿಸುವ ರಿಟರ್ನ್ ಮರು ಹೂಡಿಕೆಯಾಗುತ್ತಿರುತ್ತದೆ. ಚಕ್ರಬಡ್ಡಿಯ ಲಾಭ ಸಿಗುತ್ತದೆ. ಇದನ್ನು ಪವರ್ ಆಫ್ ಕಂಪೌಂಡಿಂಗ್ ಎನ್ನುತ್ತಾರೆ. ಉದಾಹರಣೆಗೆ HDFC ELSS Tax saver mutual fund ನಲ್ಲಿ ನೀವು 28 ವರ್ಷಗಳ ಹಿಂದೆ ತಿಂಗಳಿಗೆ 1000 ರೂ. ಹೂಡಿಕೆ ಮಾಡುತ್ತಾ ಬಂದಿದ್ದರೆ, ಈಗ ಅಂದರೆ 2024ರ ನವೆಂಬರ್ ವೇಳೆಗೆ ಇದು 1 ಕೋಟಿ 90 ಲಕ್ಷ ರೂ. ಆಗಿರುತ್ತಿತ್ತು. ಕಳೆದ 28 ವರ್ಷಗಳಲ್ಲಿ ಈ ಮ್ಯೂಚುವಲ್ ಫಂಡ್ ಸಿಪ್ 22.89% ರಿಟರ್ನ್ ಕೊಟ್ಟಿದೆ.
ಇನ್ನೊಂದು ಸರಳ ಉದಾಹರಣೆಯನ್ನು ನೋಡೋಣ. ಮ್ಯೂಚುವಲ್ ಫಂಡ್‌ನಲ್ಲಿ ಕೇವಲ 12% ರಿಟರ್ನ್ ಸಿಕ್ಕಿತು ಎಂದಿಟ್ಟುಕೊಳ್ಳಿ. ಪ್ರತಿ ತಿಂಗಳು 1,000 ರೂ.ಗಳಂತೆ 25 ವರ್ಷ ಇನ್ವೆಸ್ಟ್ ಮಾಡಿದರೆ, ನೀವು ಹೂಡಿಕೆ ಮಾಡಿದ ಒಟ್ಟು ಹಣ 3 ಲಕ್ಷ ರೂ. ಆಗಿರುತ್ತದೆ. ಈ 3 ಲಕ್ಷ ರೂ. ಹೂಡಿಕೆಗೆ ಪ್ರತಿಯಾಗಿ ನಿಮಗೆ 15 ಲಕ್ಷದ 97 ಸಾವಿರದ 635 ರೂ. ರಿಟರ್ನ್ ಸಿಗುತ್ತದೆ. ಆಗ ನಿಮಗೆ ಸಿಗುವ ಒಟ್ಟು ಮೊತ್ತ 18 ಲಕ್ಷದ 97 ಸಾವಿರದ 635 ರೂಪಾಯಿ ಆಗುತ್ತದೆ.
ಪ್ರತಿ ತಿಂಗಳು 1,000 ರೂ. SIP ಹೂಡಿಕೆಗೆ 10 ಬೆಸ್ಟ್ ಮ್ಯೂಚುವಲ್ ಫಂಡ್ ( 5 ವರ್ಷ ತನಕ ಸರಾಸರಿ ರಿಟರ್ನ್)
ಸ್ಕೀಮ್ | 1 ವರ್ಷದ ರಿಟರ್ನ್ | 3 ವರ್ಷದ ರಿಟರ್ನ್ | 5 ವರ್ಷದ ರಿಟರ್ನ್ |
ಕ್ವಾಂಟ್ ಆಕ್ಟಿವ್ ಫಂಡ್ | 22.50% | 40.27% | 22.27% |
ಪರಾಗ್ ಪರೀಖ್ ಫ್ಲೆಕ್ಸಿ ಕ್ಯಾಪ್ ಫಂಡ್ | 25.87% | 29.67% | 18.69% |
PGIM ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ | 21.60% | 31.06% | 17.39% |
ಮಿರಾಯ್ ಅಸೆಟ್ ಎಮರ್ಜಿಂಗ್ ಬ್ಲೂಚಿಪ್ ಫಂಡ್ | 18.87% | 28.91% | 16.9% |
ಕ್ವಾಂಟ್ ಲಾರ್ಜ್ & ಮಿಡ್ ಕ್ಯಾಪ್ ಫಂಡ್ | 22.66% | 28.55% | 16.55% |
ಕೋಟಕ್ ಈಕ್ವಿಟಿ ಅಪಾರ್ಚುನಿಟೀಸ್ ಫಂಡ್ | 27.19% | 28.69% | 15.76% |
ಎಡಿಲ್‌ವೈಸ್ ಲಾರ್ಜ್ &ಮಿಡ್ ಕ್ಯಾಪ್ ಫಂಡ್ | 25.68% | 29.81% | 15.71% |
ಕ್ವಾಂಟ್ ಫೋಕಸ್ಡ್ ಫಂಡ್ | 20.43% | 29.53% | 15.14% |
ಸುಂದರಂ ಫೋಕಸ್ಡ್ ಫಂಡ್ | 23.47% | 26.35% | 14.72% |
ಕೆನರಾ ರೊಬಾಕೊ ಎಮರ್ಜಿಂಗ್ ಈಕ್ವಿಟೀಸ್ ಫಂಡ್ | 26.67% | 27.98% | 14.16% |
ನೇರವಾಗಿ ಲಾರ್ಜ್‌ಕ್ಯಾಪ್, ಮಿಡ್ಲ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ವಲಯದ ಕಂಪನಿಗಳ ಷೇರುಗಳನ್ನು ಖರೀದಿಸುವ ಮೂಲಕವೂ ಹೂಡಿಕೆಯನ್ನು ಆರಂಭಿಸಬಹುದು.
ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್‌ಗಳೂ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿವೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್‌ನಲ್ಲೂ ತಿಂಗಳಿಗೆ 1,000 ರೂ. ಹೂಡಿಕೆ ಮಾಡಬಹುದು. ನ್ಯಾಶನಲ್ ಪೆನ್ಷನ್ ಸಿಸ್ಟಮ್ ಅಥವಾ ಎನ್‌ಪಿಎಸ್‌ನಲ್ಲಿ ನಿಮ್ಮ ನಿವೃತ್ತಿಯ ಬದುಕಿಗೆ ಪಿಂಚಣಿಯನ್ನು ಪಡೆಯಲು ಇನ್ವೆಸ್ಟ್ ಮಾಡಬಹುದು. ಬ್ಯಾಂಕ್‌ಗಳ ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್‌ಗಳೂ ಮತ್ತೊಂದು ಆಯ್ಕೆಯಾಗಿದೆ. ಚಿನ್ನ, ಡಿಜಿಟಲ್ ಗೋಲ್ಡ್‌ನಲ್ಲೂ ಹೂಡಿಕೆ ಮಾಡಬಹುದು. ಆದರೆ ಇವೆಲ್ಲದರ ಬಗ್ಗೆ ಒಂದೊಂದಾಗಿ ತಿಳಿದುಕೊಂಡು ಇನ್ವೆಸ್ಟ್ ಮಾಡಬೇಕು.
ಈ ಸುದ್ದಿಯನ್ನೂ ಓದಿ: Stock Market: ಸೆನ್ಸೆಕ್ಸ್ 50ಕ್ಕೆ ಜಿಯೊ, ಜೊಮ್ಯಾಟೊ ಸೇರ್ಪಡೆ