Saturday, 10th May 2025

Bengaluru Techie Case: 3 ದಿನದೊಳಗಾಗಿ ತನಿಖೆಗೆ ಹಾಜರಿರಬೇಕು; ಬೆಂಗಳೂರು ಪೊಲೀಸರಿಂದ ಟೆಕ್ಕಿ ಪತ್ನಿ & ಕುಟುಂಬಸ್ಥರಿಗೆ ನೋಟಿಸ್‌

Bengaluru techie Case

ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ (Bengaluru techie Case) ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಬೆಂಗಳೂರು ಪೊಲೀಸರು (Bengaluru Police) ಅವರ ಪತ್ನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಸಮನ್ಸ್ ಜಾರಿ ಮಾಡಿದೆ. ಜತೆಗ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಲು 3 ದಿನಗಳ ಕಾಲಾವಕಾಶ ನೀಡಿದ್ದಾರೆ.

ಅತುಲ್ ಅವರ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಬೆಂಗಳೂರು ಪೊಲೀಸರ ನಾಲ್ವರು ಸದಸ್ಯರಿರುವ ತಂಡವು ಮೃತಪಟ್ಟ ಅತುಲ್‌ ಪತ್ನಿ ನಿಖಿತಾ ಮನೆಯಾದ ಉತ್ತರ ಪ್ರದೇಶದ ಜೌನ್‌ಪುರಕ್ಕೆ ಭೇಟಿ ನೀಡಿದೆ.

ಈಗಾಗಲೇ  ಪತ್ನಿ ನಿಖಿತಾ ಸಿಂಘಾನಿಯಾ, ಅವರ ತಾಯಿ ನಿಶಾ ಸಿಂಘಾನಿಯಾ, ಅವರ ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಅವರ ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್‌ನಲ್ಲಿ 3 ದಿನಗಳೊಳಗೆ ಬೆಂಗಳೂರಿನ ತನಿಖಾಧಿಕಾರಿಯ ಮುಂದೆ ಹಾಜರಾಗಲು ನಿಮಗೆ ಸೂಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಬಿಹಾರ ಮೂಲದ ಅತುಲ್ ಸುಭಾಷ್ ಬೆಂಗಳೂರಿನಲ್ಲಿ ನೆಲೆಸಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಪತ್ನಿ ಮತ್ತು ಆಕೆಯ ಕುಟುಂಬದವರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ 24 ಪುಟಗಳ ಸೂಸೈಡ್ ನೋಟ್ ಬರೆದಿದ್ದಾರೆ ಎಂದು ವರದಿಯಾಗಿದೆ.  

ತಮ್ಮ ಸಹೋದರನ ಆತ್ಮಹತ್ಯೆ ಬಗ್ಗೆ ದೂರು ನೀಡಿರುವ ಅತುಲ್‌ ಸಹೋದರ ವಿಕಾಸ್‌, ನಿಖಿತಾ ಹಾಗೂ ಆಕೆಯ ಕುಟುಂಬದವ ವಿರುದ್ಧ ಆರೋಪ ಮಾಡಿದ್ದಾರೆ.  ʼʼಅತುಲ್‌ ಈ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ನಾವು ಭಾವಿಸಿರಲಿಲ್ಲ. ನಾವು ಅವನೊಂದಿಗೆ ಸಾಮಾನ್ಯವಾಗಿ ಮಾತನಾಡುತ್ತಿದ್ದೆವು. ಒಂದು ದಿನವೂ ತನಗಾಗುತ್ತಿರುವ ಮಾನಸಿಕ ಹಿಂಸೆ ಬಗ್ಗೆ ಹೇಳಿರಲಿಲ್ಲʼʼ ಎಂದು ವಿಕಾಸ್‌ ತಿಳಿಸಿದ್ದಾರೆ.

ನಿಖಿತಾ ಹಾಗೂ ಆಕೆಯ ಮನೆಯವರು ನನ್ನ ಸಹೋದರನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದಂತೆ ನನ್ನ ಮತ್ತು ನನ್ನ ಪೋಷಕರ ವಿರುದ್ಧವೂ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಈ ಕೇಸ್‌ನಲ್ಲಿ ನ್ಯಾಯಾಧೀಶರೂ ಶಾಮೀಲಿದ್ದು, ಅವರು ಅತುಲ್‌ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಸ್ತುತ ಬಿಹಾರದ ಸಮಸ್ತಿಪುರದಲ್ಲಿ ನೆಲೆಸಿರುವ ಸುಭಾಷ್ ಅವರ ಪತ್ನಿ ಜನವರಿ 2021ರಲ್ಲಿ ನನ್ನ ಮಗನ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಿದ್ದಳು. ಪ್ರಕರಣದ ಮೇಲುಸ್ತುವಾರಿ ವಹಿಸಿದ್ದ ನ್ಯಾಯಾಧೀಶರು ಪ್ರಕರಣವನ್ನು ಇತ್ಯರ್ಥಪಡಿಸಲು 5 ಲಕ್ಷ ರೂ. ಕೇಳಿದ್ದಾರೆ ಎಂದು ಅತುಲ್‌ ಅವರ ತಂದೆ ಆರೋಪಿಸಿದ್ದಾರೆ. ಅವರು ಮಧ್ಯಸ್ಥಿಕೆಗೆ ಮುಂದಾದಾಗ, ಮೊದಲು 20 ಸಾವಿರ ರೂ. ಕೇಳಿದ್ದರು ನಂತರ ಅದು 40 ಸಾವಿರ ರೂ.ಗೆ ಏರಿತು. ಕೊನೆಯಲ್ಲಿ ಅವರು 5 ಲಕ್ಷ ರೂ. ನೀಡಬೇಕೆಂದು ಹೇಳಿದ್ದರು ಅತುಲ್‌ ತಂದೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Kangana Ranaut: ಬೆಂಗಳೂರು ಎಂಜಿನಿಯರ್‌ ಆತ್ಮಹತ್ಯೆ ಪ್ರಕರಣ; ಶೇ. 99ರಷ್ಟು ಮದುವೆಗಳಲ್ಲಿ ಪುರುಷರೇ ತಪ್ಪು ಮಾಡುತ್ತಾರೆ ಎಂದ ಕಂಗನಾ