Sunday, 11th May 2025

Babri Masjid: ವಿವಾದಾತ್ಮಕ ಬಾಬರಿ ಮಸೀದಿ ಧ್ವಂಸವಾಗಿ 32 ವರ್ಷ; ಅಯೋಧ್ಯೆ ಮತ್ತು ಮಥುರಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಅಯೋಧ್ಯಾ: ಬಾಬರಿ ಮಸೀದಿ ಧ್ವಂಸಗೊಂಡ 32ನೇ ವರ್ಷಾಚರಣೆ ಹಿನ್ನಲೆಯಲ್ಲಿ (Babri Masjid) ಉತ್ತರ ಪ್ರದೇಶದಾದ್ಯಂತ (Uttar Pradesh) ಭದ್ರತೆಯನ್ನು ಬಿಗುಗೊಳಿಸಲಾಗಿದೆ. ಪೊಲೀಸ್ ಪಡೆ, ಭಯೋತ್ಪಾದನಾ ನಿಗ್ರಹ ದಳ ಕಮಾಂಡೋಗಳನ್ನು ಅಯೋಧ್ಯಾ (Ayodhya) ನಗರದಾದ್ಯಂತ ನಿಯೋಜಿಸಲಾಗಿದೆ. ವಿವಾದಾತ್ಮಕ ಬಾಬರಿ ಮಸೀದಿಯನ್ನು (Babri Masjid) 1992ರ ಡಿ.6ರಂದು ಕರ ಸೇವೆಯ ಮೂಲಕ ಕೆಡವಲಾಗಿತ್ತು.

ಎಎನ್ಐ (ANI) ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶ್ರೀ ರಾಮ ಜನ್ಮಭೂಮಿಯ ಪೊಲೀಸ್ ಭದ್ರತಾ ಸೂಪರಿಂಡೆಂಟ್ ಬಾಲಾಚಾರಿ ದುಬೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಪಿಎಸ್ (PAS), ಎಟಿಎಸ್ (ATS) ಮತ್ತು ಸಿವಿಲ್ ಪೊಲೀಸ್ ಪಡೆಗಳನ್ನು ಭದ್ರತೆಗಾಗಿ ಅಯೋಧ್ಯೆ ನಗರಾದ್ಯಂತ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಯೋಧ್ಯಾ ಮಂದಿರಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಮನಹರಿಸಲಾಗಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

“ಅಯೋಧ್ಯೆಯಲ್ಲಿ ಭದ್ರತಾ ಕಾರಣಗಳಿಗಾಗಿ ಸಿಆರ್‌ಪಿಎಫ್, ಪಿಎಸಿ ಮತ್ತು ಎಟಿಎಸ್ ಪಡೆಗಳನ್ನು ನಿಯೋಜಿಸಲಾಗಿದೆ ಹಾಗೂ ಸಿವಿಲ್ ಪೊಲೀಸ್ ಅಧಿಕಾರಿಗಳು ಈ ಪ್ರದೇಶದ ಸುತ್ತೆಲ್ಲಾ ಗಸ್ತು ಹೊಡೆಯುತ್ತಿದ್ದಾರೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳು ಮತ್ತು ಜನರನ್ನು ತಪಾಸಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಭದ್ರತಾ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ’ ಎಂದೂ ಬಾಲಾಚಾರಿ ದುಬೆ ಮಾಹಿತಿ ನೀಡಿದ್ದಾರೆ.

ಇನ್ನು, ಉತ್ತರಪ್ರದೇಶದ ಸಂಬಾಲಾ ಜಿಲ್ಲೆಯಲ್ಲಿ ಶುಕ್ರವಾರದ ಪ್ರಾರ್ಥನೆ ಹಿನ್ನಲೆಯಲ್ಲಿ ಇಲ್ಲಿನ ಶಾಹಿ ಜುಮಾ ಮಸೀದಿ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಪ್ರದೇಶದಲ್ಲಿ ನ.24ರಂದು ಕಲ್ಲೆಸೆತದ ಘಟನೆಗಳು ನಡೆದಿದ್ದವು.

ಇಲ್ಲಿನ ಮೊಘಲ್-ಇರಾ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ () ವತಿಯಿಂದ ಪರೀಕ್ಷೆ ನಡೆಯುತ್ತಿದ್ದ ಸಂದರ್ಭ ಉಂಟಾದ ಕಲ್ಲೆಸೆತ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು ಹಾಗೂ ಹಲವರು ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಪೊಲೀಸರು ಹಾಗೂ ಸ್ಥಳೀಯರೂ ಸೇರಿದ್ದಾರೆ.

ಮಥುರಾದಲ್ಲೂ ಭದ್ರತೆ ಬಿಗು:

ಬಾಬರಿ ಮಸಿದಿ ಧ್ವಂಸ ಪ್ರಕರಣಕ್ಕೆ 32 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಉತ್ತರಪ್ರದೇಶದ ಮಥುರಾದಲ್ಲಿರುವ ಶಾಹಿ ಈದ್ಗಾ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ಮಥುರಾ ಪಟ್ಟಣದ ಎಸ್.ಪಿ. ಅರವಿಂದ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಈ ಪ್ರದೇಶದಲ್ಲಿ ಭದ್ರತಾ ಕಾರಣಗಳಿಗಾಗಿ ಸಂಚಾರ ವ್ಯವಸ್ಥೆಯನ್ನೂ ಬದಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಈಗಾಗಲೇ ಕಠಿಣ ಎಚ್ಚರಿಕೆಯನ್ನು ನೀಡಿದೆ.

ಇದನ್ನು ಓದಿ: Lift Crashes: ಆಸ್ಪತ್ರೆಯಲ್ಲಿ ಲಿಫ್ಟ್‌ ಕುಸಿದು ಬಾಣಂತಿ ಸಾವು; 1 ದಿನದ ಹಸಿಗೂಸು ಈಗ ತಾಯಿಯಿಲ್ಲದ ತಬ್ಬಲಿ!

ಮಥುರಾದಲ್ಲಿನ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿರುವ ಜಸ್ಟಿಸ್ ಸಂಜೀವ ಖನ್ನಾ ಹಾಗೂ ಜಸ್ಟಿಸ್ ಸಂಜಯ್ ಕುಮಾರ್ ಈಗಾಗಲೇ ವಿಚಾರಣೆ ಮುಂದೂಡಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಹಲವಾರು ದೂರು ಅರ್ಜಿಗಳು ಸಲ್ಲಿಕೆಯಾಗಿದೆ.

ಇನ್ನು, ಈ ವಿವಾದಕ್ಕೆ ಸಂಬಂಧಿಸಿದಂತೆ, ಶಾಹಿ ಮಸೀದಿಯ ಆಡಳಿತ ಮಂಡಳಿಯು ಅಲಹಾಬಾದ್ ಹೈಕೋರ್ಟ್ ನಿಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ.

ಇದೇ ಸಂದರ್ಭದಲ್ಲಿ, ಮಧ್ಯಪ್ರದೇಶದ ಉಜ್ಜಯಿನಿಯಲ್ಲೂ ಸಹ ಭದ್ರತೆಯನ್ನು ಬಿಗುಗೊಳಿಸಲಾಗಿದ್ದು, ನಗರದ ಹಲವು ಪ್ರದೇಶಗಳಲ್ಲಿ ನಾಕಾಬಂಧಿ ನಡೆಸಿ ತಪಾಸಣೆ ನಡೆಸಲಾಗುತ್ತಿದೆ.