Thursday, 15th May 2025

Assembly Speaker: ದೆಹಲಿ ಅಸೆಂಬ್ಲಿ ಸ್ಪೀಕರ್‌ ರಾಮ್ ನಿವಾಸ್ ಗೋಯೆಲ್‌ ರಾಜಕಾರಣದಿಂದ ನಿವೃತ್ತಿ‌; ಇದು ಭಾವುಕ ಕ್ಷಣ ಎಂದ ಕೇಜ್ರಿವಾಲ್

ನವದೆಹಲಿ: ದೆಹಲಿ ವಿಧಾನಸಭಾ ಸ್ಪೀಕರ್(Assembly Speaker) ರಾಮ್ ನಿವಾಸ್ ಗೋಯೆಲ್(Ram Niwas Goel) ಅವರು ಗುರುವಾರ (ಡಿ. 5) ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Aravind Kejriwal) ಅವರಿಗೆ ತಮ್ಮ ವಯಸ್ಸಿನ ಕಾರಣದಿಂದಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವ ನಿರ್ಧಾರದ ಬಗ್ಗೆ ಪತ್ರ ಬರೆದಿದ್ದಾರೆ.

ಗೋಯೆಲ್‌ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಎಎಪಿ (AAP) ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ  ಅರವಿಂದ ಕೇಜ್ರಿವಾಲ್‌ “ಸಕ್ರಿಯ ರಾಜಕರಣದಿಂದ ದೂರ ಸರಿಯುವ ರಾಮ್ ನಿವಾಸ್ ಗೋಯೆಲ್ ಅವರ ನಿರ್ಧಾರವು ಒಂದು ಭಾವನಾತ್ಮಕ ಕ್ಷಣವಾಗಿದೆ” ಎಂದು ಹೇಳಿದ್ದಾರೆ. ”ಅವರು ಹಲವು ವರ್ಷಗಳಿಂದ ಸದನದ ಒಳಗೆ ಮತ್ತು ಹೊರಗೆ ನಮಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ವಯಸ್ಸು ಮತ್ತು ಆರೋಗ್ಯದ ಕಾರಣದಿಂದಾಗಿ ಅವರು ರಾಜಕೀಯದಿಂದ ದೂರ ಸರಿಯುವ ನಿರ್ಧಾರದ ಬಗ್ಗೆ ಕೆಲವು ದಿನಗಳ ಹಿಂದೆ ನನ್ನಲ್ಲಿ ಹೇಳಿದ್ದರು .ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಗೋಯೆಲ್ ಸಾಹೇಬ್ ನಮ್ಮ ಕುಟುಂಬದ ಹಿತೈಷಿ. ಮುಂದೆಯೂ ಅವರು ನಮ್ಮೊಂದಿಗೆ ಇರಲಿದ್ದಾರೆ. ನಮ್ಮ ಪಕ್ಷಕ್ಕೆ ಯಾವಾಗಲೂ ಅವರ ಅನುಭವ ಮತ್ತು ಸೇವೆಗಳು ಬೇಕಾಗುತ್ತವೆ” ಎಂದು ಕೇಜ್ರಿವಾಲ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ತಮ್ಮ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ರಾಮ್‌ ನಿವಾಸ್‌ ಗೋಯೆಲ್

ರಾಮ್ ನಿವಾಸ್ ಗೋಯೆಲ್ ಅವರು 2015ರಿಂದ ದೆಹಲಿ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ದೆಹಲಿಯ ಶಾಹದಾರ ಕ್ಷೇತ್ರದಿಂದ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದರು. ಅವರು 1993ರಲ್ಲಿ ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾದರು. ಮುಂದೆ 2015ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ರಾಮ್ ನಿವಾಸ್ ಗೋಯೆಲ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಜಿತೇಂದರ್ ಸಿಂಗ್ ಶುಂಟಿ ಅವರನ್ನು 11,731 ಮತಗಳ ಅಂತರದಿಂದ ಸೋಲಿಸಿದ್ದರು.

ದೆಹಲಿ ಏಳನೇ ವಿಧಾನಸಭೆಯು ತನ್ನ ಐದು ವರ್ಷಗಳ ಅವಧಿಯನ್ನು ಬುಧವಾರ ಮುಕ್ತಾಯಗೊಳಿಸಿದೆ. ಫೆಬ್ರವರಿ 2025ಕ್ಕೆ ನಿಗದಿಯಾಗಿರುವ ಮುಂಬರುವ ಚುನಾವಣೆಗೂ ಮೊದಲು ತನ್ನ 74ನೇ ಮತ್ತು ಅಂತಿಮ ಅಧಿವೇಶನವನ್ನು ನಡೆಸಿತು. ಸದನವನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಈ ಸಂದರ್ಭ ಭಾವನಾತ್ಮಕ ಮತ್ತು ಐತಿಹಾಸಿಕ ಎಂದರು.

ದೆಹಲಿ ಅಸೆಂಬ್ಲಿ ಸ್ಪೀಕರ್‌ ಆಗಿ ಗೋಯೆಲ್

ಗೋಯೆಲ್ ತಮ್ಮ ಅಧಿಕಾರಾವಧಿಯಲ್ಲಿ, ವಿಧಾನಸಭೆಯು ಪ್ರಶ್ನೋತ್ತರ ಅವಧಿಯಲ್ಲಿ 1,095 ಪ್ರಶ್ನೆಗಳನ್ನು ಉದ್ದೇಶಿಸಿ, 19 ಸಮಿತಿ ವರದಿಗಳನ್ನು ಮಂಡಿಸಿದೆ. 26 ಮಸೂದೆಗಳನ್ನು ಅಂಗೀಕರಿಸಿದೆ. ಹೆಚ್ಚುವರಿಯಾಗಿ 702 ವಿಶೇಷ ಉಲ್ಲೇಖಗಳು, 39 ಅಲ್ಪಾವಧಿಯ ಚರ್ಚೆಗಳು ಮತ್ತು 13 ಮೋಷನ್ಸ್‌ ಅದರ ಶಾಸಕಾಂಗ ಪ್ರಕ್ರಿಯೆಗಳ ಭಾಗವಾಗಿತ್ತು. ಸರ್ಕಾರದ ನಾಲ್ಕು ನಿರ್ಣಯಗಳು ಮತ್ತು 14 ಇತರ ನಿರ್ಣಯಗಳನ್ನು ಸಹ ಅಂಗೀಕರಿಸಲಾಗಿದೆ ಎಂದು ಸ್ವತಃ ಗೋಯೆಲ್‌ ತಿಳಿಸಿದರು.

“ಸಭಾಪತಿಯಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡಕ್ಕೂ ಸಮಾನ ಪ್ರಾಮುಖ್ಯತೆ ನೀಡಿ ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸಿದ್ದೇನೆ. ಸೀಮಿತ ಅಧಿಕಾರವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶದ ಅಸೆಂಬ್ಲಿಯಾಗಿದ್ದರೂ, ಒಂದಷ್ಟು ಗಮನಾರ್ಹವಾದ ಕೆಲಸಗಳನ್ನು ಮಾಡಿದ್ದೇವೆ”ಎಂದು ಗೋಯೆಲ್‌ ಹೇಳಿದರು.

ಈ ಸುದ್ದಿಯನ್ನೂ ಓದಿ: ಯಡಿಯೂರಪ್ಪ: ಬಿಜೆಪಿಯ ವರ್ಣರಂಜಿತ ಅಧ್ಯಾಯ