Sunday, 11th May 2025

ಅಸ್ಸಾಂನ ಕೃಷಿ ಹಬ್ಬ ಆಚರಿಸಿದ ಬಾಕ್ಸರ್​ ಲೊವ್ಲಿನಾ ಬೊರ್ಗೊಹೈನ್

ಸರುಪಥರ್​ (ಅಸ್ಸಾಂ): ದೇಶವೇ ಮೆಚ್ಚುವಂಥ ಪ್ರತಿಭೆಯಾಗಿ ಬೆಳೆದ ಬಾಕ್ಸರ್​ ಲೊವ್ಲಿನಾ ಬೊರ್ಗೊಹೈನ್ ತಮ್ಮ ತವರು ರಾಜ್ಯ ಅಸ್ಸಾಂನ ಕೃಷಿ ಹಬ್ಬ ‘ಕಟಿ ಬಿಹು’ ಆಚರಿಸಿದರು. ಈ ಸಂದರ್ಭದಲ್ಲಿ ಅವರು​ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

ಗೋಲಾಘಾಟ್​ ಜಿಲ್ಲೆಯ ಸುಂದರ ಪ್ರಕೃತಿಯ ಮಡಿಲಿನಲ್ಲಿರುವ ತಮ್ಮ ಹಳ್ಳಿ ಸರುಪಥರ್​ನಲ್ಲಿ ಲೊವ್ಲಿನಾ ಹಬ್ಬಾಚರಿಸಿದ್ದಾರೆ. ಮನೆಯಲ್ಲಿರುವ ತುಳಸಿ ಗಿಡದ ಬಳಿ ದೀಪ ಬೆಳಗಿ, ಸಾಂಪ್ರದಾಯಿಕ ಆಚರಣೆಗಳನ್ನು ಮಾಡುವ ಮೂಲಕ ಖುಷಿ ಅನುಭವಿಸಿದರು.

ಭಾರತದ ಶ್ರೇಷ್ಠ ಬಾಕ್ಸರ್​ಗಳ ಪೈಕಿ ಒಬ್ಬರೆಂದು ಹೆಸರಾಗಿರುವ ಲೊವ್ಲಿನಾ ಬೊರ್ಗೊಹೈನ್​ ಇತ್ತೀಚೆಗೆ ಏಷ್ಯಾ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ಲೊವ್ಲಿನಾ ತುಳಸಿ ಗಿಡದ ಕೆಳಗೆ ಸಾಂಪ್ರದಾಯಿಕ, ಕರಕುಶಲ ಪಪಾಯ ದೀಪಗಳನ್ನು ಅಲಂಕರಿಸಿ, ಬೆಳಗುತ್ತಿರುವುದು ಕಾಣಬಹುದು. ಇದು ಈ ಹಬ್ಬದ ಪ್ರಮುಖ ಸಾಂಸ್ಕೃತಿಕ ಮಹತ್ವದ ಸಂಕೇತವಾಗಿದೆ.

ಲವ್ಲಿನಾ ಅಸ್ಸಾಂನ ಜನರಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ‘ಕಟಿ ಬಿಹು ಹಬ್ಬದ ಸಂದರ್ಭದಲ್ಲಿ ನಿಮಗೆಲ್ಲಾ ಶುಭಾಶಯಗಳು. ನಿಮಗೆ ಯಶಸ್ಸು ಹಾಗೂ ಸಮೃದ್ಧಿಯನ್ನು ಬಯಸುತ್ತೇನೆ. ತುಳಸಿ ಗಿಡದ ಕೆಳಗೆ ಹಚ್ಚುವ ದೀಪಗಳು ಪ್ರತಿಯೊಬ್ಬರ ಭರವಸೆ ಹಾಗೂ ಆಕಾಂಕ್ಷೆಗಳನ್ನು ಬೆಳಗಿಸಲಿ. ರೈತರ ಹಸಿರು ಗದ್ದೆಗಳು ಚಿನ್ನದ ಬೀಜಗಳಿಂದ ತುಂಬಲಿ’ ಎಂದು ಬರೆದಿದ್ದಾರೆ.

ಕಟಿ ಬಿಹು ಅಸ್ಸಾಂನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಭಾಗ. ರಾಜ್ಯಾದ್ಯಂತ ಪ್ರತಿ ಗದ್ದೆ, ಬೆಳೆಗಳ ಹೊಲಗಳಲ್ಲೂ ಆಕಾಶದೀಪಗಳನ್ನು ಬೆಳಗಿಸಿ, ಹಾರಿ ಬಿಡಲಾಗುತ್ತದೆ.

Leave a Reply

Your email address will not be published. Required fields are marked *