ನವದೆಹಲಿ: ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ (New York Times) ಪ್ರಕಟಿಸಿರುವ 2025ರಲ್ಲಿ ಭೇಟಿ ಕೊಡಬಹುದಾದ ವಿಶ್ವದ ಅತ್ಯುತ್ತಮ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಈಶಾನ್ಯ ರಾಜ್ಯವಾಗಿರುವ (North Eastern State) ಅಸ್ಸಾಂ (Assam) 4ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಒಟ್ಟು 52 ಸ್ಥಳಗಳ ಹೆಸರನ್ನು ಪ್ರಕಟಿಸಲಾಗಿದೆ (List Of 52 Places To Visit In 2025).
‘ವೈವಿಧ್ಯಮಯ ಸಂಸ್ಕೃತಿ ಮತ್ತು ಜನ ನಿಬಿಡ ಮುಕ್ತ ಪ್ರದೇಶ’ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವಿಶ್ಲೇಷಣೆಯಲ್ಲಿ ಅಸ್ಸಾಂನ ಮಹತ್ವವನ್ನು ಉಲ್ಲೇಖಿಸುತ್ತಾ ಹೇಳಿದೆ. ‘ಪ್ರವಾಸೋದ್ಯಮ ವಿಚಾರದಲ್ಲಿ 2025ರಲ್ಲಿ ಈ ಭಾಗವು ಹೊರ ಜಗತ್ತಿಗೆ ತನ್ನನ್ನು ತಾನು ಇನ್ನಷ್ಟು ತೆರೆದುಕೊಳ್ಳಲಿದೆ’ ಎಂದು ಇದರಲ್ಲಿ ತಿಳಿಸಲಾಗಿದೆ.
‘ಮಯನ್ಮಾರ್ ಮತ್ತು ಬಾಂಗ್ಲಾ ದೇಶಗಳ ಗಡಿಗಳನ್ನು ಹಂಚಿಕೊಂಡಿರುವ ಅಸ್ಸಾಂ ಪರ್ವತ ಪ್ರದೇಶಗಳಿಂದ ಕೂಡಿದ ತಾಣವಾಗಿದ್ದು, ಇದು ಭಾರತದ ಈಶಾನ್ಯ ರಾಜ್ಯಗಳಿಗೆ ಒಂದು ರಹದಾರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಭಾರತದ ಮುಖ್ಯ ಭಾಗದಿಂದ ಒಂದು ಹಗ್ಗದಿಂದ ಜೋಡಿಸಲ್ಪಟ್ಟ ರೀತಿಯಲ್ಲಿ ಅಸ್ಸಾಂ ಗೋಚರಿಸುತ್ತದೆ ಎಂದು ಈ ರಾಜ್ಯದ ವಿಶೇಷತೆಗಳ ಬಗ್ಗೆ ಇದರಲ್ಲಿ ವಿವರಿಸಲಾಗಿದೆ.
ಅಸ್ಸಾಂನ ಅಂತಾರಾಷ್ಟ್ರೀಯ ಗುರುತಿಸುವಿಕೆ ಮತ್ತು ಹೆಚ್ಚು ಹೆಚ್ಚು ತೆರೆದುಕೊಳ್ಳುವಿಕೆಯನ್ನು ಉಲ್ಲೇಖಿಸುತ್ತಾ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ನೋಡಬಹುದಾದ ಪ್ರಮುಖ ಸ್ಥಳಗಳನ್ನೂ ಸಹ ತಿಳಿಸಲಾಗಿದೆ. ‘2024ರಲ್ಲಿ ಖೈರೈಡೋ ಮೊಯ್ಡಮ್ಸ್ ಅಥವಾ ಅಸ್ಸಾಂನ ಪಿರಮಿಡ್‌ಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವನ್ನಾಗಿ ಮಾನ್ಯ ಮಾಡಲಾಗಿದೆ. ಈ ಪ್ರಾಚೀನ ಸುಟ್ಟ ಕಲ್ಲುಗಳು, ಆಹೋಂ ರಾಜ ಮನೆತನದ ಅವಧಿಯಲ್ಲಿ ಅಂದರೆ 13 ಮತ್ತು 19ನೇ ಶತಮಾನಗಳಲ್ಲಿ ನಿರ್ಮಿಸಲಾಗಿದೆ. ಇದು ಈ ಭಾಗದ ರಾಜ ಮನೆತನಗಳ ಪರಂಪರೆ ಮತ್ತು ಧಾರ್ಮಿಕ ಸಾರದ ನೋಟವನ್ನು ಒದಗಿಸುತ್ತದೆ’ ಎಂದು ತಿಳಿಸಲಾಗಿದೆ.
‘ಇಷ್ಟು ಮಾತ್ರವಲ್ಲದೇ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ವಿಶ್ವ ಪ್ರಸಿದ್ಧ ಚಹಾ ತೋಟಗಳು ಮತ್ತು ಕಾಝಿರಂಗ ರಾಷ್ಟ್ರೀಯ ಪಾರ್ಕ್ ಗೂ ಭೇಟಿ ನೀಡಬಹುದು ಮತ್ತು ಇಲ್ಲಿರುವ ಖಡ್ಗ ಮೃಗಗಳನ್ನು ಕಂಡು ಖುಷಿ ಪಡಬಹುದು’ ಎಂದೂ ಟಿಪ್ಪಣಿ ನೀಡಲಾಗಿದೆ.
ಇಷ್ಟು ಮಾತ್ರವಲ್ಲದೇ ಇತ್ತಿಚಿನ ದಿನಗಳಲ್ಲಿ ಅಸ್ಸಾಂನಲ್ಲಿ ನಡೆದಿರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಳ ಕುರಿತಾಗಿಯೂ ಇಲ್ಲಿ ಉಲ್ಲೇಖಿಸಲಾಗಿದೆ. ‘ಅಸ್ಸಾಂನ ದೊಡ್ಡ ನಗರವಾಗಿರುವ ಗೌಹಾತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣವು 2025ರಲ್ಲಿ ವಿಸ್ತರಣೆಗೊಳ್ಳಲು ಸಜ್ಜಾಗಿದೆʼ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Border Clashes: ಗಡಿ ವಿವಾದ; ಬಾಂಗ್ಲಾದೇಶ ರಾಯಭಾರಿಗೆ ಭಾರತ ಸಮನ್ಸ್!
ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಟಾಪ್ 10 ಸ್ಥಾನಗಳನ್ನು ಪಡೆದುಕೊಂಡಿರುವ ಪ್ರವಾಸಿ ತಾಣಗಳ ಪಟ್ಟಿ ಇಲ್ಲಿದೆ:
1. ಜೇಮ್ ಆಸ್ಟಿನ್ಸ್- ಇಂಗ್ಲೆಂಡ್
2. ಗಾಲಾಪಾಗೋಸ್ ದ್ವೀಪಗಳು
3. ನ್ಯೂಯಾರ್ಕ್ ಪಟ್ಟಣದ ಮ್ಯೂಸಿಯಂ
4. ಅಸ್ಸಾಂ- ಭಾರತ
5. ‘ವೈಟ್ ಲೋಟಸ್’- ಥಾಯ್ಲೆಂಡ್
6. ಗ್ರೀನ್ ಲ್ಯಾಂಡ್
7. ಐಕ್ಸ್-ಇನ್-ಪ್ರಾವೆನ್ಸ್- ಫ್ರಾನ್ಸ್
8. ಸನ್ ವ್ಯಾಲಿ- ಇಡಾಹೋ
9. ಲುಂಬಿನಿ- ನೇಪಾಳ
10. ಸಿಡ್ನಿ- ಆಸ್ಟ್ರೇಲಿಯಾ
ಈ 10 ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊರತುಪಡಿಸಿ, ಈ ಪಟ್ಟಿಯಲ್ಲಿ ಕೋಸ್ಟರಿಕಾದ ನಿಕಾರಗುವಾಮ ಪಿಕ್ಷರ್ ಸ್ಕ್ಯೂ ಕೊಲೋನಿಯಲ್ ಟೌನ್ಸ್ ಮತ್ತು ಸ್ವೀಪಿಂಗ್ ಸ್ಟ್ರೆಚಸ್ ಆಫ್ ವೈಟ್ ಸ್ಯಾಂಡ್ ಸ್ಥಾನ ಪಡೆದಿವೆ.