ನವದೆಹಲಿ: ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ (india alliance) ಕೂಟದಲ್ಲಿ ಬಿರುಕು ಮೂಡಿರುವ ಮಾತುಗಳು ಆಗಾಗ ಕೇಳಿಬರುತ್ತಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈತ್ರಿ ಕೂಟವನ್ನು ಮುನ್ನೆಡುಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಅದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಆಮ್ ಆದ್ಮಿ (Aam aadmi party) ಪಕ್ಷ ಕೂಡ ಮೈತ್ರಿಯಿಂದ ಹೊರಬರುವ ಮುನ್ಸೂಚನೆ ನೀಡಿದೆ. ಆಮ್ ಆದ್ಮಿ ನಾಯಕ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಮಾತನಾಡಿದ್ದಾರೆ(Arvind Kejriwal).
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Assembly Election) ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಮತ್ತು ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಅರವಿಂದ್ ಕೇಜ್ರಿವಾಲ್ ಗುರುವಾರ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ತನ್ನ ಸ್ವಂತ ಬಲದ ಮೇಲೆ ಈ ಚುನಾವಣೆಯಲ್ಲಿ ಹೋರಾಡಲಿದೆ. ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ಮುಂಬರಲಿರುವ ವಿಧಾನ ಸಭಾ ಚುನಾವಣೆಗೆ ಮುಂಚಿತವಾಗಿ ಸೀಟು ಹಂಚಿಕೆಗಾಗಿ ಆಮ್ ಆದ್ಮಿ ಇಂಡಿಯಾ ಮೈತ್ರಿ ಕೂಟದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಕೇಜ್ರಿವಾಲ್ ಎಲ್ಲಾ ಸಾಧ್ಯತೆಗಳನ್ನು ಅಲ್ಲಗಳೆದಿದ್ದಾರೆ.
Aam aadmi party will be fighting this election on its own strength in Delhi. There is no possibility of any alliance with congress. https://t.co/NgDUgQ8RDo
— Arvind Kejriwal (@ArvindKejriwal) December 11, 2024
ಕೇಜ್ರಿವಾಲ್ ಮೈತ್ರಿ ಸ್ಪರ್ಧೆ ಕುರಿತ ಸುದ್ದಿಯನ್ನು ತಳ್ಳಿಹಾಕಿರುವುದು ಇದೇ ಮೊದಲಲ್ಲ. ಈ ತಿಂಗಳ ಆರಂಭದಲ್ಲಿ ಕೇಜ್ರಿವಾಲ್, ಪಕ್ಷವು ಸತತ ಮೂರನೇ ಬಾರಿಗೆ ಚುನಾವಣೆ ಗೆಲ್ಲಲು ಗಮನಹರಿಸುತ್ತಿರುವುದರಿಂದ ದೆಹಲಿ ವಿಧಾನಸಭಾ ಚುನಾವಣೆಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಇತ್ತ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನ ಸಭೆಯ ಚುನಾವಣೆ ಬಳಿಕ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಮೂಡಿರುವ ಅನುಮಾನ ಹೆಚ್ಚಾಗಿದೆ. ನಾಯಕತ್ವ ಬದಲಾಗಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹಿಸಿದರೆ, ಕಾಂಗ್ರೆಸ್ ಇದನ್ನು ವಿರೋಧಿಸಿದೆ. ಕೆಲ ದಿನಗಳ ಹಿಂದೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು ಹಾಗೂ ತಾವು ಒಕ್ಕೂಟವನ್ನು ಮುನ್ನಡೆಸುವ ಬಗ್ಗೆ ಮಾತನಾಡಿದ್ದರು. ಅದಕ್ಕೀಗ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕೂಡ ದನಿಗೂಡಿಸಿದ್ದಾರೆ. ಸೋಮವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಮಮತಾ ಬ್ಯಾನರ್ಜಿಯವರು ಮೈತ್ರಿಯ ನಾಯಕಿಯಾದರೆ ಖುಷಿಯಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Rahul Gandhi: ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಪಿಐಎಲ್ ವಜಾ, ದೂರುದಾರರಿಗೆ 25 ಸಾವಿರ ರೂ. ದಂಡ