Sunday, 11th May 2025

ಆಯಪಲ್ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇತನದಲ್ಲಿ ಶೇ.40 ಕಡಿತ

ನವದೆಹಲಿ: ಆಯಪಲ್ (Apple) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್​ ಕುಕ್ ವೇತನದಲ್ಲಿ 2023ನೇ ಸಾಲಿನಲ್ಲಿ ಶೇಕಡಾ 40ಕ್ಕೂ ಹೆಚ್ಚಿನ ಕಡಿತ ಮಾಡಲಾಗಿದೆ.

ಕಂಪನಿಯು ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿದ ವಿವರಗಳಿಂದ ಈ ಮಾಹಿತಿ ತಿಳಿದುಬಂದಿದೆ. ಆದರೆ, ಟಿಮ್​ ಕುಕ್ ಅವರಿಗೆ ನೀಡುವ ಷೇರಿನ ಪಾಲನ್ನು ಕಂಪನಿ ಹೆಚ್ಚಿಸಲಿದೆ.

2022ರ ಸೆಪ್ಟೆಂಬರ್​ಗೆ ಕೊನೆಗೊಂಡಂತೆ ಟಿಮ್ ಕುಕ್ ಅವರಿಗೆ ವಾರ್ಷಿಕ 99.4 ಕೋಟಿ ಡಾಲರ್ ವೇತನ ನೀಡಲಾಗಿತ್ತು. ಷೇರುದಾರರ ವಾರ್ಷಿಕ ಸಭೆಯ ಬಳಿಕ ಸಿಇಒ ವೇತನದಲ್ಲಿ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ. 2026ರ ಮೊದಲು ನಿವೃತ್ತಿಯಾಗುವುದಿದ್ದಲ್ಲಿ ಅವರಿಗೆ ನೀಡುವ ನಿರ್ಬಂಧಿತ ಷೇರಿನ ಸಂಖ್ಯೆಯಲ್ಲಿಯೂ ಕಡಿತ ಮಾಡಲಾಗಿದೆ. ಕುಕ್ ಅವರೇ ಮಾಡಿದ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯಪಲ್ ತಿಳಿಸಿದೆ.

ಆಯಪಲ್​​ನ ಕಾರ್ಯನಿರ್ವಹಣೆಗೆ ಅನುಗುಣವಾಗಿ ಕುಕ್ ಅವರಿಗೆ ನೀಡಲಾಗುವ ಷೇರಿನ ಪ್ರಮಾಣವನ್ನು 2023ರಲ್ಲಿ ಶೇಕಡಾ 50ರಿಂದ 75ಕ್ಕೆ ಹೆಚ್ಚಿಸಲಾಗಿದೆ. 2022ರಲ್ಲಿ ಕುಕ್ ಅವರು 30 ಲಕ್ಷ ಡಾಲರ್ ಮೂಲ ವೇತನದೊಂದಿಗೆ 99.4 ಕೋಟಿ ಡಾಲರ್ ಒಟ್ಟು ವೇತನ ಪಡೆದಿದ್ದರು.

2011ರಲ್ಲಿ ಸ್ಟೀವ್ ಜಾಬ್ಸ್ ಅವರಿಂದ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ನಿರಂತರವಾಗಿ ಉತ್ತಮ ಕಾರ್ಯನಿರ್ವಹಣೆ ತೋರುತ್ತಿರುವುದಕ್ಕಾಗಿ ಕುಕ್ ಅವರನ್ನು ಆಯಪಲ್ ಅಭಿನಂದಿಸಿದೆ.