Monday, 12th May 2025

Allu Arjun : ಪೊಲೀಸ್‌ ವಿಚಾರಣೆಗೆ ಹಾಜರಾದ ಅಲ್ಲು ಅರ್ಜುನ್‌; ಠಾಣೆಯ ಸುತ್ತಮುತ್ತಲೂ ಬಿಗಿ ಭದ್ರತೆ

Allu Arjun

ಹೈದರಾಬಾದ್‌: ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ (Hyderabad stampede) ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್‌ (Allu Arjun) ಮೇಲೆ ಪ್ರಕರಣ ದಾಖಲಾಗಿದ್ದು, ಇದೀಗ ಅವರು ಮಧ್ಯಂತರ ಜಾಮೀನಿನ ಮೂಲಕ ಹೊರಬಂದಿದ್ದಾರೆ. ಆದರೆ ಇದೀಗ ಮತ್ತೆ ಹೈದರಾಬಾದ್‌ ಪೊಲೀಸರು ಸ್ಟಾರ್‌ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದ್ದಾರೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆಗೆ ಅಲ್ಲು ಅರ್ಜುನ್‌ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ವಿಚಾರಣೆಗಾಗಿ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಿಂದ ಹೊರಟು  ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಅಲ್ಲು ಅರ್ಜುನ್ ಪರ ವಕೀಲರು ಪೊಲೀಸ್ ಠಾಣೆಯಲ್ಲಿದ್ದಾರೆ.

ಅಲ್ಲು ಅರ್ಜುನ್‌ ಆಗಮನದಿಂದಾಗಿ ಠಾಣೆಯ ಸುತ್ತಮುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಉಸ್ಮಾನಿಯಾ ವಿವಿಯ ಹಲವರು ಅಲ್ಲು ಅರ್ಜುನ್ ಮನೆಗೆ ದಾಳಿ ಮಾಡಿ ದಾಂಧಲೆ ನಡೆಸಿದ್ದರು. ಇದೀಗ ಜುಬಿಲಿ ಹಿಲ್ಸ್‌ನಲ್ಲಿರುವ ನಟ ಅಲ್ಲು ಅರ್ಜುನ್ ಅವರ ಮನೆಯ ಹೊರಗೆ ಭದ್ರತೆಯನ್ನು ನಿಯೋಜಿಸಲಾಗಿದೆ.

ಚಿಕ್ಕಡಪಲ್ಲಿ ಎಸಿಪಿ ರಮೇಶ್ ಕುಮಾರ್ ವಿಚಾರಣೆ ನಡೆಸಲಿದ್ದು, ಹೈದರಾಬಾದ್ ಕೇಂದ್ರ ವಲಯದ ಡಿಸಿಪಿ ಅಕ್ಷಾಂಶ್ ಯಾದವ್ ಕೂಡ ಅಲ್ಲು ಅರ್ಜುನ್ ವಿಚಾರಣೆಯಲ್ಲಿ ಹಾಜರಿದ್ದಾರೆ ಎಂಬುದು ತಿಳಿದು ಬಂದಿದೆ.

ರಾಜಕೀಯ ತಿರುವು ಪಡೆದ ಕೇಸ್‌

ಈ ಪ್ರಕರಣದಲ್ಲಿ ಅಲ್ಲು ಅರ್ಜುನ್‌ ಅವರ ತಪ್ಪಿಲ್ಲ, ಸರ್ಕಾರದ ನಡೆ ತಪ್ಪು ಎಂದು ಪ್ರತಿ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ರೇವಂತ್‌ ರೆಡ್ಡಿ ಬಗ್ಗೆ ಕಿಡಿ ಕಾರಿದ ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಅಲ್ಲು ಅರ್ಜುನ್‌ ಮನೆ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿ , ಕಲ್ಲು ಎಸೆದ ವ್ಯಕ್ತಿ ಸಿಎಂ ರೇವಂತ್ ರೆಡ್ಡಿ ಅವರ ಆಪ್ತ ಹಾಗೂ ಡಂಗಲ್ ಯೂತ್ ಕಾಂಗ್ರೆಸ್ ಸದಸ್ಯ ಎಂಬ ಸ್ಪೋಟಕ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸೇಡಿನ ರಾಜಕಾರಣದಿಂದ ಬಳಲುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪೊಲೀಸರು ಸರ್ಕಾರದ ಕೈಗೊಂಬೆಯಾಗಿದ್ದಾರೆ,ಮಧ್ಯಂತರ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ಮಾಡದಿದ್ದಕ್ಕೆ ಅಲ್ಲು ಅರ್ಜುನ್ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Allu Arjun: ಕಾನೂನು ಪಾಲಿಸುವ ನಾಗರಿಕ ನಾನು… ತನಿಖೆಗೆ ಸಹಕರಿಸುತ್ತೇನೆ; ಜೈಲಿನಿಂದ ರಿಲೀಸ್‌ ನಂತರ ಅಲ್ಲು ಅರ್ಜುನ್‌ ಫಸ್ಟ್‌ ರಿಯಾಕ್ಷನ್‌