Thursday, 15th May 2025

Agra Horror: Raw ಏಜೆಂಟ್‌ ಎಂದು ನಂಬಿಸಿ ಕೆನಡಾ ಮಹಿಳೆ ಜತೆ ಸ್ನೇಹ; ಅಸಲಿ ತಿಳಿಯೋ ಮುನ್ನ ನಡೆದಿತ್ತು ಘನಘೋರ ಘಟನೆ!

ಆಗ್ರಾ: RAW ಏಜೆಂಟ್ ಸೋಗಿನಲ್ಲಿ ಆಗ್ರಾದ ಜಿಮ್‌ ಟ್ರೈನರ್‌(Gym Trainer) ಒಬ್ಬ ಕೆನಡಾದ ಮಹಿಳೆಯ(Canadian Woman) ಮೇಲೆ ಲೈಂಗಿಕ ದೌರ್ಜನ್ಯ(Agra Horror) ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಶೋಷಣೆಗಾಗಿ ಅವನ ವಿರುದ್ಧ ಅತ್ಯಾಚಾರ(Rape) ಮತ್ತು ಕ್ರಿಮಿನಲ್ ಬೆದರಿಕೆಯ(Criminal Intimidation) ಪ್ರಕರಣ ದಾಖಲಾಗಿದೆ ಎಂದು ಆಗ್ರಾ ಪೊಲೀಸರು ಮಾಹಿತಿ ನೀಡಿದ್ದಾರೆ.

ದೂರು ನೀಡಿರುವ ಮಹಿಳೆಯ ಪ್ರಕಾರ, ಆರೋಪಿಯು ರಾ ಏಜೆಂಟ್‌ನಂತೆ ವರ್ತಿಸಿ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಅವಳೊಂದಿಗೆ ಸ್ನೇಹ ಸಂಪಾದಿಸಿದ್ದಾನೆ. ಕೆಲವೇ ದಿನಗಳಲ್ಲಿ ಇಬ್ಬರ ನಡುವೆಯೂ ದೈಹಿಕ ಸಂಪರ್ಕ ಬೆಳೆದಿದೆ. ಮಹಿಳೆಯು ಮತ್ತೆ ಕೆನಡಾಕ್ಕೆ ಹಿಂದಿರುಗಿದಾಗ ಆಕೆ ಗರ್ಭಿಣಿಯಾಗಿರುವುದು ಅವಳ ಗಮನಕ್ಕೆ ಬಂದಿದೆ. ತನ್ನ ಸ್ಥಿತಿಯನ್ನು ಜಿಮ್ ಟ್ರೈನರ್‌ಗೆ ತಿಳಿಸಿದಾಗ ಅವನು ಮಹಿಳೆಯನ್ನು ಬೆದರಿಸಿದ್ದಾನೆ ಎಂದು ಹೇಳಲಾಗಿದೆ. ಇದೀಗ ಐಟಿ ಕಾಯಿದೆಯ 64, 123, 351 (2), 74 ಮತ್ತು ಸೆಕ್ಷನ್ 67 ಸೇರಿದಂತೆ BNS ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಪೊಲೀಸರು ಹೇಳೋದೇನು?

ಎಫ್‌ಐಆರ್‌ ನಲ್ಲಿ ದಾಖಲಿಸಿರುವಂತೆ, ಆರೋಪಿ ಸಾಹಿಲ್ ಶರ್ಮಾ ಮಹಿಳೆಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ಎಫ್‌ಐಆರ್‌ನಲ್ಲಿ ಮಹಿಳೆ ಸಾಹಿಲ್‌ನ ಇಬ್ಬರು ಸ್ನೇಹಿತರನ್ನೂ ಹೆಸರಿಸಿದ್ದಾರೆ. ಮಾರ್ಚ್‌ನಲ್ಲಿ ತಾನು ಭಾರತದಲ್ಲಿದ್ದಾಗ ಟೆಂಡರ್‌ನಲ್ಲಿ ಸಾಹಿಲ್‌ನನ್ನು ಮೊದಲು ಭೇಟಿಯಾಗಿದ್ದೆ ಎಂದು ಹೇಳಿದ್ದಾಳೆ . ಒಮ್ಮೆ ಭೇಟಿಯಾದ ನಂತರ ಸಾಹಿಲ್ ಮಹಿಳೆಯನ್ನು ಮಾರ್ಚ್ 20 ರಂದು ಹೋಟೆಲ್‌ಗೆ ಊಟಕ್ಕೆ ಆಹ್ವಾನಿಸಿದ್ದಾನೆ.

ಹೋಟೆಲ್ ಕೋಣೆಯ ಟೇಬಲ್‌ ಮೇಲೆ ಕೂಲ್‌ ಡ್ರಿಂಕ್ಸ್ ಮತ್ತು ಪಿಜ್ಜಾವಿದ್ದು, ಅದನ್ನು ಸೇವಿಸಿದ ನಂತರ ಇದ್ದಕ್ಕಿದ್ದಂತೆ ಮಹಿಳೆಗೆ ತಲೆ ತಿರುಗಿದೆ. ದೇಹದ ಮೇಲಿನ ಪ್ರಜ್ಞೆಯನ್ನು ಕಳೆದುಕೊಂಡಿದ್ದಾಳೆ. ಈ ವೇಳೆ ಜಿಮ್‌ ಟ್ರೈನರ್ ಸಾಹಿಲ್ ಅತ್ಯಾಚಾರವೆಸಗಿದ್ದಾನೆ. ಪ್ರಜ್ಞೆ ಬಂದ ನಂತರ ಅವಳಿಗೆ ಸತ್ಯತೆ ಗೊತ್ತಾಗಿದೆ. ಅವನ ವಿರುದ್ಧ ಪ್ರತಿಭಟಿಸಿದ್ದಾಳೆ. ಆದರೆ ಅವನು ಗುಪ್ತಚರ ಸಂಸ್ಥೆ RAW ನ ಏಜೆಂಟ್ ಎಂದು ಹೇಳಿ ಬೆದರಿಸಿದ್ದಾನೆ ಎಂದು ಸ್ವತಃ ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾಳೆ.

ಇನ್ನು ಸಾಹಿಲ್ ಮಹಿಳೆಯನ್ನು ಮದುವೆಯಾಗಲು ಬಯಸಿದ್ದೇನೆ ಎಂದು ತಿಳಿಸಿದ್ದು, ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಸುಳ್ಳು ಹೇಳಿದ್ದಾನೆ. ಅಷ್ಟೇ ಅಲ್ಲದೆ, ತಾನು ಯಾರ ಕಣ್ಣಿಗೂ ಬೀಳುವಂತಿಲ್ಲ ಹಾಗಾಗಿ ವಾಟ್ಸಾಪ್ ಚಾಟ್‌ಗಳು ಮತ್ತು ಕರೆಗಳ ಡಿಟೇಲ್ಸ್‌ ಅನ್ನು ಡಿಲೀಟ್‌ ಮಾಡುವಂತೆ ಮಹಿಳೆಯನ್ನು ಒತ್ತಾಯಿಸಿದ್ದಾನೆ. ತನ್ನನ್ನು ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಸಾಹಿಲ್‌ ಸ್ನೇಹಿತ ಆರಿಫ್ ಅಲಿಯನ್ನು ಭೇಟಿಯಾಗುವಂತೆಯೂ ಮಾಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ. ಈಗ ಆರಿಫ್ ಅಶ್ಲೀಲ ಚಿತ್ರಗಳೊಂದಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಫೋಟೊಗಳು ಸಾಹಿಲ್ ನಿಂದ ಬಂದಿರುವುದಾಗಿ ಅವನು ಹೇಳಿಕೊಂಡಿದ್ದಾನೆ. ಕೆನಡಾಕ್ಕೆ ಹಿಂದಿರುಗಿದ ನಂತರ, ಮಹಿಳೆ ತನ್ನ ಗರ್ಭಧಾರಣೆಯ ಬಗ್ಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಾಹಿಲ್‌ಗೆ ತಿಳಿಸಿದ್ದಳು. ಇದಾದ ಕೂಡಲೇ ಆತ ತನ್ನನ್ನು ಬ್ಲಾಕ್ ಮಾಡಿದ್ದಾಗಿ ಅವಳು ತನ್ನ ದೂರಿನಲ್ಲಿ ಹೇಳಿದ್ದಾಳೆ.

ಮಹಿಳೆ ತನ್ನ ದೂರಿನ ಕೊನೆಯಲ್ಲಿ “ಸಾಹಿಲ್ ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ನನಗೆ ಬೇರೆ ಯಾವುದೇ ದಾರಿ ಕಾಣುತ್ತಿಲ್ಲ, ನಾನು ಸಿಕ್ಕಿಬಿದ್ದಿದ್ದೇನೆ. ಅವನು ನನ್ನ ನಗ್ನ ಫೋಟೋಗಳನ್ನು ಡಾರ್ಕ್ ವೆಬ್‌ನಲ್ಲಿ ಅಪ್‌ಲೋಡ್ ಮಾಡುವ ಬಗ್ಗೆಯೂ ಮಾತನಾಡಿದ್ದಾನೆ. ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಮತ್ತು ಅದಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದೇನೆ” ಎಂದು ಬರೆದಿದ್ದಾಳೆ. ತನಿಖೆ ಪೂರ್ಣಗೊಂಡ ನಂತರ ಸಾಹಿಲ್‌ನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:NHRC Panel chief: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ರಾಹುಲ್‌, ಖರ್ಗೆ ತಕರಾರು!