Sunday, 11th May 2025

Actor Mukesh: ನಟ ಮುಕೇಶ್‌ ವಿರುದ್ಧ ದಾಖಲಾಗಿದ್ದ ಲೈಂಗಿಕ ಕಿರುಕುಳ ಕೇಸ್‌ ವಾಪಾಸ್‌; ಸಂತ್ರಸ್ತ ನಟಿಯ ಅಚ್ಚರಿಯ ನಡೆಗೆ ಕಾರಣ ಏನು?

Physical abuse

ತಿರುವನಂತಪುರಂ : ಕೇರಳದ ಸಿಪಿಐಎಂ (CPIM) ಶಾಸಕ ಎಂ ಮುಖೇಶ್ (Actor Mukesh) ಸೇರಿದಂತೆ ಪ್ರಮುಖ ನಟರ ವಿರುದ್ಧ ಅತ್ಯಾಚಾರದ (Physical abuse) ಆರೋಪಗಳನ್ನು ಮಾಡಿದ್ದ ಮಲಯಾಳಂ ನಟಿ (Malayalam actress) ಕೇರಳ ಸರ್ಕಾರ (Kerala Government) ತನ್ನನ್ನು ಮಾನಸಿಕವಾಗಿ ಛಿದ್ರಗೊಳಿಸಿದೆ. ತನಗೆ ಸೂಕ್ತ ಬೆಂಬಲವನ್ನು ಒದಗಿಸದ ಕಾರಣ ಇನ್ನು ಮುಂದೆ ತಾನು ಕಾನೂನು ಹೋರಾಟವನ್ನು ಮುಂದುವರಿಸುವುದಿಲ್ಲ ಎಂದು ಶುಕ್ರವಾರ ಅವರು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು ,ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದೆ. ತನಗೆ ಕಿರುಕುಳವಾಗಿದೆ ಎಂದು ಮುಂದೆ ಬಂದ ಹೆಣ್ಣು ಮಕ್ಕಳಿಗೆ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ. ನಾನು ಮಾನಸಿಕವಾಗಿ ಬಳಲಿದ್ದೇನೆ. ನೋವನ್ನು ಅನುಭವಿಸಿದ್ದೇನೆ. ಹಾಗಾಗಿ ಪ್ರಕರಣವನ್ನು ಮುಂದೆ ತೆಗೆದುಕೊಂಡು ಹೋಗಲು ಬಯಸುವುದಿಲ್ಲ. ನಾನು ಯಾರೊಂದಿಗೂ ರಾಜಿ ಮಾಡಿಕೊಂಡು ಪ್ರಕರಣವನ್ನು ಹಿಂದೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದರು.

ಮಣಿಯನ್ಪಿಳ್ಳ ರಾಜು ಮತ್ತು ಇಡವೇಲ ಬಾಬು ಸೇರಿದಂತೆ ನಟರ ವಿರುದ್ಧ ದೂರು ನೀಡಿದ ನಂತರ ಪೋಕ್ಸೋ ಪ್ರಕರಣದಲ್ಲಿ ತನ್ನನ್ನು ಆರೋಪಿಯನ್ನಾಗಿ ಮಾಡಲಾಗಿದೆ ಮತ್ತು ಸರ್ಕಾರ ತನ್ನನ್ನು ರಕ್ಷಿಸಲು ಏನೂ ಮಾಡಲಿಲ್ಲ. ನಾನು ನಿರಪರಾಧಿ. ನನಗೆ ನ್ಯಾಯ ಬೇಕು. ನನ್ನ ವಿರುದ್ಧದ ಇರುವ ಪೋಕ್ಸೋ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು. ಒಂದು ವೇಳೆ ನಾನು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರಕಾರವೇ ಹೊಣೆಯಾಗಲಿದೆ ಎಂದು ಸಂತ್ರಸ್ತೆ ಹೇಳಕೊಂಡಿದ್ದಾಳೆ.

ತಮ್ಮ ಫೇಸ್‌ಬುಕ್‌ ಖಾತೆಯಲ್ಲಿಯೂ ಇದನ್ನೇ ಹಂಚಿಕೊಂಡಿರುವ ಅವರು ಸರ್ಕಾರವನ್ನು ದೂಷಿಸಿದ್ದಾರೆ. ಈ ಪ್ರಕರಣದ ಕುರಿತು ನಾನು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದೆ. ನನ್ನ ಮನವಿಗಳ ಹೊರತಾಗಿಯೂ, ಪೊಲೀಸರು ಸಂಪೂರ್ಣವಾಗಿ ತನಿಖೆ ಮಾಡಲು ವಿಫಲರಾದರು, ನಾನೀಗ ಅಸಹಾಯಕಳಾಗಿದ್ದೇನೆ. ಯಾರ ರಕ್ಷಣೆ ಬೆಂಬಲ ಇಲ್ಲದೆ ನನಗೆ ಹೋರಾಟ ನಡೆಸಲು ಸಾಧ್ಯವಾಗುತ್ತಿಲ್ಲ.‌ ದುರುದ್ದೇಶ ಇಟ್ಟುಕೊಂಡು ನನ್ನ ಮೇಲೆ ಸೆಕ್ಸ್ ಮಾಫಿಯಾದ ಮಧ್ಯವರ್ತಿ ಎಂದು ಆರೋಪ ಹೊರಿಸಿದ್ದಾರೆ. ಇದೆಲ್ಲ ನನ್ನ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಟ್ರೋಲ್‌ ಮಾಡಿದ್ದಾರೆ.

ನಾನು ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇನೆ. ಮೊದಲು ನನ್ನ ವಿರುದ್ಧ ಇರುವ ಪೋಕ್ಸೋ ಪ್ರಕರಣವನ್ನು ಪರಿಹರಿಸಿ, ನಂತರ ಇತರ ಪ್ರಕರಣಗಳ ಬಗ್ಗೆ ಬಗ್ಗೆ ಗಮನಹರಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Me Too Movement: ಕೇರಳದಂತೆ ಲೈಂಗಿಕ ದೌರ್ಜನ್ಯ ತನಿಖಾ ಸಮಿತಿ ರಚಿಸಿ: ಸಿಎಂಗೆ ನಟಿ ಸಂಜನಾ ಮನವಿ

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಪಕ್ರರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರವು ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶ ನೀಡಿತ್ತು. ಸಂಪೂರ್ಣ ವರದಿಯನ್ನು ಕೇರಳ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದು, ಚಿತ್ರೋದ್ಯಮದಲ್ಲಿನ ಲೈಂಗಿಕ ದೌರ್ಜನ್ಯದ ದೂರುಗಳ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹಸ್ತಾಂತರಿಸುವಂತೆ ಸೂಚಿಸಿದೆ.