Saturday, 10th May 2025

ಏಳನೇ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ

ವದೆಹಲಿ: ದೇಶದ ಜನ ಕುತೂಹಲದಿಂದ, ನಿರೀಕ್ಷೆಯಿಂದ ಕಾಯುತ್ತಿರುವ ಕೇಂದ್ರ ಬಜೆಟ್‌ ಮಂಡನೆಗೆ ಕೆಲವೇ ಕ್ಷಣಗಳು ಬಾಕಿ ಇವೆ. ಏಳನೇ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮಾಡಲಿದ್ದಾರೆ.

2023ರ ಬಜೆಟ್‌ನಲ್ಲಿ, ಹೊಸ ತೆರಿಗೆ ಕಾಯ್ದೆ ಅಡಿಯಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ 50,000 ರಿಂದ ರೂ 3 ಲಕ್ಷಕ್ಕೆ ಹೆಚ್ಚಿಸಿದರು ಮತ್ತು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 87 ಎ ಅಡಿಯಲ್ಲಿ ರಿಯಾಯಿತಿಯನ್ನು ರೂ 5 ಲಕ್ಷದಿಂದ ರೂ 7 ಲಕ್ಷಕ್ಕೆ ಏರಿಕೆ ಮಾಡಲಾಯಿತು. ಅಂದರೆ ರೂ 7 ಲಕ್ಷದವರೆಗೆ ಆದಾಯ ಹೊಂದಿರುವವರು ಹೊಸ ಆಡಳಿತದಲ್ಲಿ ಯಾವುದೇ ತೆರಿಗೆಯನ್ನು ಪಾವತಿಸ ಬೇಕಾಗಿಲ್ಲ.

ಇನ್ನು ಇದರ ಹೊರತಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ಸಂಬಳದಾರರು ಹೂಡಿಕೆ ಹಾಗೂ ವೆಚ್ಚಗಳ ಮೇಲೆ ವಾರ್ಷಿಕವಾಗಿ 1.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಗೃಹ ಸಾಲದ ಅಸಲು, ಬಡ್ಡಿ, ಆರೋಗ್ಯ ವಿಮೆಯ ಪ್ರೀಮಿಯಂ ಮೊತ್ತ, ಪಿಪಿಎಫ್‌ ಹೂಡಿಕೆ ಸೇರಿ ಹಲವು ರೀತಿಯ ಹೂಡಿಕೆಗಳು ಹಾಗೂ ವೆಚ್ಚಗಳ ಮೂಲಕ 1.5 ಲಕ್ಷರೂ.ಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಈ ಮೊತ್ತವನ್ನು ಕೇಂದ್ರ ಸರ್ಕಾರವು 1.5 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸಂಬಳ ಪಡೆಯುವ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 70 ಸಾವಿರ ರೂ. ಅಥವಾ ಒಂದು ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸದ್ಯ, ಹೊಸ ಹಾಗೂ ಹಳೆಯ ತೆರಿಗೆ ಪದ್ಧತಿಯಲ್ಲೂ 50 ಸಾವಿರ ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಇದೆ. ಇದನ್ನು, 1 ಲಕ್ಷ ರೂ.ಗೆ ಏರಿಕೆ ಮಾಡಿದರೆ, ಸಂಬಳದಾರರು ಹೆಚ್ಚಿನ ತೆರಿಗೆ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಹಣದುಬ್ಬರ ಏರಿಕೆ ಸೇರಿ ಹಲವು ಕಾರಣಗಳಿಂದಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಅಥವಾ ತೆರಿಗೆ ವಿನಾಯಿತಿ ಮೊತ್ತವನ್ನು ಏರಿಕೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಹಾಗಾಗಿ, ಮೊತ್ತವನ್ನು ಏರಿಕೆ ಮಾಡಲು ನಿರ್ಮಲಾ ಸೀತಾರಾಮನ್‌ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ದೇಶದ ಸುಮಾರು 50 ಕೋಟಿ ಬಡವರಿಗೆ ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸ ಲಾಗಿದೆ. ಇನ್ನು, 70 ವರ್ಷ ದಾಟಿದ ಎಲ್ಲರಿಗೂ ಆಯುಷ್ಮಾನ್‌ ಭಾರತ್‌ ಯೋಜನೆಯ ಸೌಲಭ್ಯವನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಜತೆಗೆ, ವಿಮಾ ಮೊತ್ತವನ್ನು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಏರಿಕೆ ಮಾಡುವ ಕುರಿತು ಕೂಡ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 12,076 ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *