Wednesday, 14th May 2025

ನದಿ ಪಾತ್ರಕ್ಕೆ ಉರುಳಿ ಬಿದ್ದ ಬಸ್‍: ಆರು ಮಂದಿ ಯೋಧರು ಸಾವು

ಶ್ರೀನಗರ: ಅಮರನಾಥ್ ಯಾತ್ರೆಯ ಭದ್ರತಾ ಕೆಲಸ ಮುಗಿಸಿ ಮರಳುತ್ತಿದ್ದ ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರಿದ್ದ ಬಸ್‍ ನದಿ ಪಾತ್ರಕ್ಕೆ ಉರುಳಿ ಬಿದ್ದು ಆರು ಮಂದಿ ಯೋಧರು ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಚಂದನವಾರಿಯಿಂದ ಪಾಹಲ್ಗಾಮ್‍ಗೆ ಯೋಧರನ್ನು ಕರೆದೊಯ್ಯುತ್ತಿದ್ದ ಬಸ್ ಚಂದನವಾರಿಯ ಬಳಿ ಮೊರ್ಹ ಫ್ರಿಸ್ಲಾನ್ ತಿರುವಿನಲ್ಲಿ ಬ್ರೆಕ್ ಫೈಲ್ ಆಗಿ ಹಿಡಿತ ತಪ್ಪಿದೆ. ಎತ್ತರದ ಪ್ರದೇಶದಿಂದ ಬಸ್ ಸರಣಿ ಉರುಳುಗಳ ಮೂಲಕ ನದಿ ಪಾತ್ರಕ್ಕೆ ಬಿದ್ದಿದೆ.

ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯಕ್ಕೆ ಆಗಸ್ಟ್ 11ರಂದು ನಿಯೋಜಿಸಿದ್ದ ಇಂಡೋ -ಟಿಬೆಟಿಯನ್ ಗಡಿ ಭದ್ರತಾ ಪಡೆಯ 37 ಮತ್ತು ಜಮ್ಮು-ಕಾಶ್ಮೀರದ ಇಬ್ಬರು ಪೊಲೀಸರು ವಾಪಾಸ್ ಬರುತ್ತಿದ್ದರು.

ದುರ್ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು, ಪೊಲೀಸರು, ಪ್ರಕೃತಿ ವಿಕೋಪ ನಿರ್ವಹಣಾ ಪಡೆಯ ಯೋಧರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತಪಟ್ಟ ಆರು ಮಂದಿ ಯೋಧರ ಪಾರ್ಥಿವ ಶರೀರವನ್ನು ನದಿಪಾತ್ರದ ಕಣಿವೆಯಿಂದ ಮೇಲಕ್ಕೆ ತಂದಿದ್ದಾರೆ. ಕಲ್ಲಿನ ರಾಶಿಯ ದುರ್ಘಮ ಹಾದಿಯಲ್ಲಿ ಗಾಯಾಳುಗಳನ್ನು ಮೇಲಕ್ಕೆ ಸಾಗಿಸಲಾಗಿದೆ. 19 ಆಂಬ್ಯುಲೆನ್ಸ್‍ಗಳು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿವೆ.