Thursday, 15th May 2025

5ಜಿ ನೆಟ್ ವರ್ಕ್ ಸೇವೆಗಾಗಿ ಸ್ಪೆಕ್ಟ್ರಂಗಳ ಹರಾಜಿಗೆ ಅನುಮೋದನೆ

ನವದೆಹಲಿ: ಮುಂದಿನ ಜುಲೈ ತಿಂಗಳನಲ್ಲಿ ಬಹುನಿರೀಕ್ಷಿತ 5ಜಿ ನೆಟ್ ವರ್ಕ್ ಸೇವೆಗಾಗಿ ಸ್ಪೆಕ್ಟ್ರಂಗಳನ್ನು ಹರಾಜು ಹಾಕಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

4ಜಿ ಗಿಂತಲೂ ಹತ್ತು ಪಟ್ಟು ವೇಗದ ಇಂಟರ್ ನೆಟ್ ಮತ್ತು ಅಂತರ್ಜಾಲ ಸೇವೆ ಒದಗಿಸುವ 5ಜಿ ಸೇವೆ ಶೀಘ್ರವೇ ದೇಶದ ಜನರಿಗೆ ಲಭ್ಯವಾಗಲಿದೆ ಎಂದು ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವನಿ ವೈಷ್ಣವ್ ಹೇಳಿದರು.

ಮುಂದಿನ 20 ವರ್ಷ ಗಳ ಕಾಲಾವಧಿವರೆಗೂ ಅನ್ವಯವಾಗುವಂತೆ 72,097.85 ಎಂಎಚ್‍ಝಡ್ ಸ್ಪೆಕ್ಟ್ರಂಗಳನ್ನು ಸೇವಾ ವಲಯ ಹಾಗೂ ಕಂಪೆನಿ ಗಳಿಗೆ ಹರಾಜು ಹಾಕಲಾಗುತ್ತಿದೆ. ಇದು ಪರಿಸರ ಸ್ನೇಹಿ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಲಿದೆ ಎಂದು ಹೇಳಿದ್ದಾರೆ.

2021ರ ಸೆಪ್ಟಂಬರ್ ತಿಂಗಳಿನಲ್ಲಿ 5 ಜಿ ಸೇವೆಯನ್ನು ಘೋಷಿಸಲಾಗಿತ್ತು. ಮುಂದಿನ ಹರಾಜಿನಲ್ಲಿ ಶೂನ್ಯ ಸ್ಪೆಕ್ಟ್ರಂ ಬಳಕೆದಾರರ ದರವೂ ಒಳಗೊಂಡಿದೆ. ಹರಾಜಿನಲ್ಲಿ ತರಂಗಾಂತರ ಪಡೆದ ಕಂಪೆನಿಗಳು ಮೌಲ್ಯದ ಪ್ರಮುಖ ಮೊತ್ತವನ್ನು ಮುಂಗಡವಾಗಿ ಪಾವತಿಸುವ ಬದಲಿಗೆ 20 ಕಂತುಗಳಲ್ಲಿ ಪಾವತಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ಪ್ರತಿವರ್ಷ ಆರಂಭದಲ್ಲೇ ಹಣ ಪಾವತಿ ಮಾಡಬೇಕು, 10 ವರ್ಷಗಳ ಬಳಿಕ ಅನಿವಾರ್ಯ ಸಂದರ್ಭದಲ್ಲಿ ಸ್ಪೆಕ್ಟ್ರಂಗಳನ್ನು ಸರ್ಕಾರಕ್ಕೆ ಮರಳಿಸಬಹುದು, ಆ ವೇಳೆ ಮುಂದಿನ ಕಂತುಗಳ ಪಾವತಿಯಿಂದ ವಿನಾಯಿತಿ ಪಡೆಯಬಹುದು ಎಂದು ಹೇಳಿಕೆ ಯಲ್ಲಿ ತಿಳಿಸಲಾಗಿದೆ.