ಮುಂಬೈ : ಗುಲಾಬ್ ಚಂಡ ಮಾರುತದಿಂದಾಗಿ ಭಾರಿ ಮಳೆ ಸುರಿಯುತ್ತಿದ್ದು, 25 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸುತ್ತಿದೆ.
ಮಹಾರಾಷ್ಟ್ರದಲ್ಲಿ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. 17 ಕ್ಕೂ ಹೆಚ್ಚು ಮಂದಿ ಅವಘಡಗಳಲ್ಲಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಮರಾಠವಾಡ ಮತ್ತು ವಿದರ್ಭದ ಕೆಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ನದಿಗಳು ಮತ್ತು ನಾಲೆಗಳು ಉಕ್ಕಿ ಹರಿಯುತ್ತಿದ್ದು, ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ಅನೇಕ ಮಂದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ರಕ್ಷಣ ಕಾರ್ಯಾಚರಣೆ ನಡೆಯುತ್ತಿದೆ. ಬೆಳೆ ಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಮಧ್ಯ ಮಹಾರಾಷ್ಟ್ರದಲ್ಲಿ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದು, ತೆಲಗಾಂಣದಲ್ಲೂ ಕುಂಭದ್ರೋಣ ಮಳೆ ಸುರಿಯುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಕೋಲ್ಕತಾ ನಗರದ ಆಹಿರಿಟೋಲಾ ರಸ್ತೆಯಲ್ಲಿ ಗೋಡೆ ಕುಸಿದು 3 ವರ್ಷ ಪ್ರಾಯದ ಮಗು ದಾರುಣವಾಗಿ ಮೃತಪಟ್ಟಿವೆ. ದೇಶದ ವಿವಿಧೆಡೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತೀವ್ರತೆ ಪಡೆಯುತ್ತಿದ್ದು, ಶುಕ್ರವಾರದಿಂದ ಗುಜರಾತ್ ನಲ್ಲೂ ಭಾರಿ ಮಳೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.