Saturday, 10th May 2025

2024 Political Recap: 2024ರಲ್ಲಿ ಹೇಗಿತ್ತು ಇಂಡಿಯನ್ ಪಾಲಿಟಿಕ್ಸ್ – ಇಲ್ಲಿದೆ ಮಹತ್ತರ ಘಟನೆಗಳ ಸುದ್ದಿ ವಿಶ್ಲೇಷಣೆ

ನವದೆಹಲಿ: 2024ರ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ. ಪ್ರತೀ ಸಲವೂ ವರ್ಷವೊಂದು ಸಂದು ಹೋಗುವ ಸಂದರ್ಭದಲ್ಲಿ ಆ ವರ್ಷದಲ್ಲಿ ನಡೆದ ಪ್ರಮುಕ ಬೆಳವಣಿಗೆಗಳ ಕಡೆಗೊಂದು ಹಿನ್ನೋಟ (2024 Political Recap) ಹರಿಸುವ ಪರಿಪಾಠ ಬಹಳ ಹಿಂದಿನಿಂದಲೂ ನಡೆದುಬಂದಿದೆ. ಈ ಹಿನ್ನಲೆಯಲ್ಲಿ, ಭಾರತದಲ್ಲಿ ಈ ವರ್ಷ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಗಳು, ವಿವಾದಗಳು, ಚುನಾವಣೆಗಳು, ಗದ್ದುಗೆ ಗುದ್ದಾಟಗಳ ಅವಲೋಕನ ಇಲ್ಲಿದೆ.

2024ನೇ ಇಸವಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಗಮನಾರ್ಹವಾದ ವರ್ಷವಾಗಿದೆ. ಈ ವರ್ಷ ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಬಹಳಷ್ಟು ವಿವಾದಗಳು ಭುಗಿಲೆದ್ದು ದೇಶದಲ್ಲೇ ಸದ್ದು ಮಾಡಿತ್ತು. ಅವುಗಳಲ್ಲಿ ಪ್ರಮುಖವಾಗಿ ಉಲ್ಲೇಖಿಸುವುದಾದರೆ ಮಣಿಪುರದಲ್ಲಿ ನಡೆದ ಧಂಗೆ ಮತ್ತು ಹಿಂಸಾಚಾರ ದೇಶಾದ್ಯಂತ ಸದ್ದು ಮಾಡಿದರೆ, ಎಲೆಕ್ಟೋರಲ್ ಬಾಂಡ್ ಸ್ಕೀಂ ರದ್ದು ಮಾಡಿದ ಸುಪ್ರಿಂ ಕೋರ್ಟಿನ ಮಹತ್ವದ ತೀರ್ಪನ್ನು ಇಲ್ಲಿ ಉಲ್ಲೇಖಿಸಲೇಬೇಕಾಗಿದೆ. ಒಟ್ಟಿನಲ್ಲಿ ದೇಶದ ರಾಜಕೀಯ ಬೆಳವಣಿಗೆಗಳು ಈ ವರ್ಷ ಕೋಮು ಉದ್ವಿಗ್ನತೆ, ರಾಜಕೀಯ ಗೊಂದಲ ಮತ್ತು ದೊಡ್ಡ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು.

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವಿವಿಧ ಪಕ್ಷಗಳ ರಾಜಕಾರಣಿಗಳು ನೀಡಿದ ಹೇಳಿಕೆ, ಪ್ರತಿಕ್ರಿಯೆಗಳು ಈ ರಾಜಕೀಯ ಉದ್ವಿಗ್ನತೆಗೆ ಇನ್ನಷ್ಟು ತುಪ್ಪ ಸುರಿಯುವ ಕೆಲಸವನ್ನು ಮಾಡಿತ್ತು. ಹಲ್ಡ್ ವಾನಿ ಹಿಂಸೆ ಮತ್ತು ರೈತರ ಪ್ರತಿಭಟನೆಯ ಪುನರಾವರ್ತನೆ ಈ ಬಾರಿ ಮತ್ತೆ ಸದ್ದು ಮಾಡಿತ್ತು.

ಮಣಿಪುರ ಜನಾಂಗೀಯ ಹಿಂಸೆ

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸೆ ಈ ವರ್ಷ ಇನ್ನಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು. ಈ ಹಿಂಸೆಯಲ್ಲಿ ನೂರಾರು ಜನರು ಸಾವನ್ನಪಿದ್ದು ಹಾಗೂ ಹಿಂಸೆ ಎಲ್ಲಾ ಕಡೆ ವ್ಯಾಪಿಸಿದ್ದು ಪ್ರಮುಖ ಸುದ್ದಿಯಾಗಿತ್ತು ಮತ್ತು ಹಲವರ ಕಳವಳಕ್ಕೆ ಕಾರಣವಾಗಿತ್ತು. ಇಲ್ಲಿ ಹಿಂಸೆಯನ್ನು ಸರಿಯಾಗಿ ನಿಯಂತ್ರಿಸುವಲ್ಲಿ ಅಲ್ಲಿನ ರಾಜ್ಯ ಸರಕಾರದ ವೈಫಲ್ಯತೆ ಹಾಗೂ ವಿವಿಧ ಜನಾಂಗೀಯ ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚುವಂತೆ ಮಾಡಿದ್ದಕ್ಕೆ ರಾಜ್ಯ ಸರಕಾರ ತೀವ್ರ ಟೀಕೆಗಳನ್ನೆದುರಿಸಬೇಕಾಯ್ತು. ಮಾತ್ರವಲ್ಲದೇ, ಈ ಹಿಂಸಾಚಾರವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾದ ಮಣಿಪುರ ಪೊಲೀಸ್ ವ್ಯವಸ್ಥೆಯ ಕುರಿತಾಗಿ ಸುಪ್ರೀಂ ಕೋರ್ಟ್ ಅಸಮಧಾನ ವ್ಯಕ್ತಪಡಿಸಿ ಮಧ್ಯಪ್ರವೇಶ ಮಾಡಬೇಕಾದ ಸ್ಥಿತಿಯೂ ನಿರ್ಮಾಣಗೊಂಡಿತ್ತು.

ಎಲೆಕ್ಟೋರಲ್ ಬಾಂಡ್ ರದ್ದತಿ

ಈ ವರ್ಷದ ಐತಿಹಾಸಿಕ ಕೋರ್ಟ್ ತಿರ್ಪಿನಲ್ಲಿ, ಸುಪ್ರೀಂ ಕೋರ್ಟ್ (Supreme Court of India) ಎಲೆಕ್ಟೋರಲ್ ಬಾಂಡ್ ಸ್ಕೀಂ (Electoral Bond Scheme) ಅನ್ನು ಅಸಾಂವಿಧಾನಿಕ ಎಂದು ಘೋಷಿಸಿ ಮಹತ್ವದ ತೀರ್ಪನ್ನು ನೀಡಿತ್ತು. ಇದು ಮಾಹಿತಿ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಸುಪ್ರಿಂಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು. ಇದು ರಾಜಕೀಯ ಪಕ್ಷಗಳಿಗೆ ಹರಿದು ಬರುವ ಹಣದ ಹರಿವು ಮತ್ತು ಅವುಗಳ ಲೆಕ್ಕಾಚಾರಗಳ ಪಾರದರ್ಶಕತೆಗೆ ಈ ತೀರ್ಪು ದಾರಿ ಮಾಡಿಕೊಟ್ಟಿತು ಮಾತ್ರವಲ್ಲದೇ ಈ ತೀರ್ಪು ದೇಶಾದ್ಯಂತ ವ್ಯಾಪಕ ಚರ್ಚೆಗೂ ಸಹ ಕಾರಣವಾಯಿತು.

ಯೋಧರ ಕುರಿತು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ:

2024ರ ಲೋಕಸಭಾ ಚುನಾವಣೆ ಸಾಕಷ್ಟು ವಿವಾದಗಳಿಗೆ ಸಾಕ್ಷಿಯಾಯಿತು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ನೀಡಿದ ಹಲವಾರು ಹೇಳಿಕೆಗಳು ವಿವಾದದ ಕಿಡಿಯನ್ನು ಹೊತ್ತಿಸಿದವು. ಇದಕ್ಕೆ ಪ್ರದಾನಿ ನರೇಂದ್ರ ಮೋದಿಯವರೂ (Narendra Modi) ಹೊರತಾಗಿರಲಿಲ್ಲ. ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನ ಮೋದಿ ಅವರು ವಿರೋಧ ಪಕ್ಷಗಳ ನಾಯಕರ ಬಗ್ಗೆ ನೀಡಿದ್ದ ‘ಮುಜ್ರಾ’ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ತಮ್ಮ ಮತ ಬ್ಯಾಂಕನ್ನು ಓಲೈಸಲು ‘ಮುಜ್ರಾ’ ನೃತ್ಯ ಮಾಡುತ್ತಾರೆಂದು ಪ್ರದಾನಿ ಮೋದಿ ಅವರು ಹೇಳಿದ್ದರು. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ದೇಶದ ಸೈನಿಕರ ಬಗ್ಗೆ ನೀಡಿದ ಹೇಳಿಕೆಯೊಂದೂ ಸಹ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತು. ಮೋದಿ ಈ ದೇಶದಲ್ಲಿ ಸಾಮಾಜಿಕ-ಆರ್ಥಿಕ ಮಟ್ಟದ ಆಧಾರದಲ್ಲಿ ಎರಡು ವಿಧದ ಸೈನಿಕರನ್ನು ಹುಟ್ಟುಹಾಕಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದರು. ರಾಹುಲ್ ಅವರ ಈ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರನ್ನೂ ಸಹ ಸಲ್ಲಿಸಲಾಗಿತ್ತು.

ಅನಧಿಕೃತ ಮದ್ರಸಾ ಧ್ವಂಸ:

ಉತ್ತರಾಖಂಡದ ಹಲ್ದ್ ವಾನಿಯಲ್ಲಿ ಅನಧಿಕೃತ ಮದ್ರಸವೊಂದನ್ನು ಧ್ವಂಸಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಘಟರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿ ನೂರಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ವರದಿಯಾಗಿತ್ತು. ಈ ಗಲಭೆಯನ್ನು ನಿಯಂತ್ರಿಸಲು ಸ್ಥಳೀಯಾಡಳಿತ ಮತ್ತು ಸ್ಥಳೀಯ ಪೊಲೀಸ್ ವ್ಯವಸ್ಥೆ, ಇಂಟರ್ನೆಟ್ ಸ್ಥಗಿತ ಮತ್ತು ಗಲಭೆಕೋರರ ವಿರುದ್ಧ ಕಂಡಲ್ಲಿ ಗುಂಡಿನಂತ ಕಠಿಣ ಕ್ರಮಗಳನ್ನು ಕೈಗೊಳ್ಳುವಷ್ಟರಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು.

ಮತ್ತೆ ಪುನರಾರಂಭಗೊಂಡ ರೈತರ ಪ್ರತಿಭಟನೆ:

ಪಂಜಾಬ್ ಮತ್ತು ಹರ್ಯಾಣಗಳಲ್ಲಿ 2024ರಲ್ಲಿ ಮತ್ತೆ ರೈತರ ಪ್ರತಿಭಟನೆ ಭಾರೀ ಸದ್ದು ಮಾಡಿತ್ತು. ಉತ್ತಮ ಕನಿಷ್ಟ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರೈತರು ಮತ್ತೆ ಪ್ರತಿಭಟನೆಗೆ ಕೂತಿದ್ದಾರೆ. ರೈತರ ಈ ಪ್ರತಿಭಟನೆ ಸರಕಾರದ ಕೃಷಿ ನೀತಿಗಳು ಹಾಗೂ ಗ್ರಾಮೀಣ ಭಾಗದ ಜನರ ಆರ್ಥಿಕ ಸ್ಥಿತಿಗಳ ಮೇಲೆ ಮತ್ತೆ ಬೆಳಕು ಚೆಲ್ಲುವ ಸಾಧ್ಯತೆಗಳಿವೆ.

ಇವಿಎಂ (EVM) ಹ್ಯಾಕ್ ಆರೊಪ:

ಇದೊಂದು ಹಳೆಯ ವಿಷಯವಾಗಿದ್ದು, ನಮ್ಮ ದೇಶದಲ್ಲಿ ಪ್ರತೀ ಬಾರಿ ಚುನಾವಣಾ ಸಂದರ್ಭದಲ್ಲಿ ಈ ವಿಷಯ ಮತ್ತು ವಿವಾದ ಮುನ್ನಲೆಗೆ ಬರುತ್ತಿರುತ್ತದೆ. ಅದರಂತೆ ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ, ಜಾರ್ಖಂಡ್, ಹರ್ಯಾಣ ಮತ್ತು ಜಮ್ಮ-ಕಾಶ್ಮೀರ ವಿಧಾನಸಭಾ ಚುನಾವಣೆಗಳಲ್ಲಿ, ಎನ್.ಡಿ.ಎ. ಮೈತ್ರಿಕೂಟ ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಗೆದ್ದು ಅಧಿಕಾರಕ್ಕೇರಿದೆ. ಇಂಡಿ ಮೈತ್ರಿಕೂಟ ಜಾರ್ಖಂಡ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ಜಯಭೇರಿ ಬಾರಿಸಿದೆ. ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಸೋಲಿನ ಬಳಿಕ ಇಂಡಿ ಮೈತ್ರಿಕೂಟದ ಪಕ್ಷಗಳು ಇವಿಎಂ ಆಧಾರಿತ ಚುನಾವಣೆಯನ್ನು ವಿರೋಧಿಸಿವೆ ಹಾಗೂ ಇವಿಎಂ ಹ್ಯಾಕ್ ಆಗಿದ್ದರಿಂದ ಈ ರಾಜ್ಯಗಳಲ್ಲಿ ನಮಗೆ ಸೋಲಾಗಿದ್ದು, ಮತ್ತೆ ಮತಪತ್ರ ಆಧಾರಿತ ಚುನಾವಣಾ ಪದ್ಧತಿಯನ್ನು ಮರುಜಾರಿ ಮಾಡುವಂತೆ ಈ ಪಕ್ಷಗಳು ಆಗ್ರಹಿಸಿವೆ.

ಈ ಸುದ್ದಿಯನ್ನೂ ಓದಿ: Vinod Kambli: ನನ್ನ ತಲೆ ತಿರುಗುತ್ತಿದೆ, ನಾನು ಕುಸಿದು ಹೋಗಿದ್ದೇನೆ: ಅನಾರೋಗ್ಯದ ಬಗ್ಗೆ ಮೌನ ಮುರಿದ ವಿನೋದ್ ಕಾಂಬ್ಳಿ

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಭರ್ಜರಿ ಗೆಲುವನ್ನು ಸಂಪಾದಿಸಿತ್ತು. ಈ ಸೋಲಿನ ಬೆನ್ನಲ್ಲೇ ಮಹಾ ವಿಕಾಸ ಅಘಾಡಿ ಇವಿಎಂ ಹಗರಣದ ಬಗ್ಗೆ ಧ್ವನಿ ಎತ್ತಿದ್ದು ಮಾತ್ರವಲ್ಲದೇ ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ದೂರು ಅರ್ಜಿಯನ್ನೂ ಸಹ ಸಲ್ಲಿಸಿದೆ. ಆದರೆ, ನ್ಯಾಯಾಲವು ಈ ದುರು ಅರ್ಜಿಯನ್ನು ತಿರಸ್ಕರಿಸಿದೆ. ಮತ್ತು ನೀವು ಸೋತಾಗ ಇವಿಎಂ ಹ್ಯಾಕ್ ಎನ್ನುತ್ತೀರಿ, ಅದೇ ನೀವು ಗೆದ್ದಾಗ ಇವಿಎಂ ಸರಿಯಾಗಿರುತ್ತದೆಯೇ ಎಂದು ಅರ್ಜಿದಾರರನ್ನು ನ್ಯಾಯಾಲವು ತರಾಟೆಗೆ ತೆಗೆದುಕೊಂಡಿತ್ತು. ಹೀಗೆ ಒಟ್ಟಿನಲ್ಲಿ 2024 ನಮ್ಮ ದೇಶದಲ್ಲಿ ಹಲವಾರು ರಾಜಕೀಯ ವಿಪ್ಲವಗಳು ಮತ್ತು ಘಟನೆಗಳಿಗೆ ಕಾರಣವಾಗಿದ್ದಂತೂ ಸುಳ್ಳಲ್ಲ.