Sunday, 11th May 2025

ನಕಲಿ ಮದ್ಯ ಸೇವನೆ: ಮೃತರ ಸಂಖ್ಯೆ 13

ಪಾಟ್ನಾ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ.

ಇದಕ್ಕೂ ಮೊದಲು, ಶನಿವಾರ ಮತ್ತು ಮಂಗಳವಾರದ ನಡುವೆ ಮದನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಿರಿಯಾವಾ ಗ್ರಾಮದ ಮೂವರು ಮತ್ತು ರಾಣಿಗಂಜ್ ಗ್ರಾಮದ ಇಬ್ಬರು ಸೇರಿದಂತೆ, ಐವರು ವಿಷಯುಕ್ತ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ.

ಜಾರ್ಖಂಡ್‌ನಿಂದ ರವಾನೆಯಾದ ಮದ್ಯವನ್ನು ಮದನ್‌ಪುರ, ಸಲೈಯಾ ಮತ್ತು ಗಯಾದ ಆಮಾಸ್ ಬ್ಲಾಕ್‌ನಲ್ಲಿ ವಿತರಿಸಲಾಗಿದೆ. ಸದ್ಯ ಮದ್ಯ ಮಾರಾಟ ನಡೆಯುತ್ತಿದ್ದು, ಈ ಭಾಗದ ಹಳ್ಳಿಗಳು ಬಲಿಯಾಗುತ್ತಿವೆ. ಮಂಗಳವಾರ, ಮೂವರು ನಿಗೂಢ ಸಂದರ್ಭ ಗಳಲ್ಲಿ ಮೃತಪಟ್ಟಿದ್ದಾರೆ. ಎಂಟು ಜನರು ಗಯಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮದುವೆ ಸಮಾರಂಭದಲ್ಲಿ ವಿಷಪೂರಿತ ಮದ್ಯ ಸೇವಿಸಿದ್ದಾರೆ ಎಂದು ಮೃತರ ಕುಟುಂಬ ಸ್ಥರು ಆರೋಪಿಸಿದ್ದಾರೆ. ಮೃತರನ್ನು ಅಮರ್ ಪಾಸ್ವಾನ್ (26), ರಾಹುಲ್ ಕುಮಾರ್ (27) ಮತ್ತು ಅರ್ಜುನ್ ಪಾಸ್ವಾನ್ (43) ಎಂದು ಗುರುತಿಸಲಾಗಿದೆ.

ಸಂತ್ರಸ್ತರು ಜಿಲ್ಲೆಯ ಆಮಾಸ್ ಪೊಲೀಸ್ ಠಾಣಾ ವ್ಯಾಪ್ತಿಯ ಪತ್ರಾ ಗ್ರಾಮಕ್ಕೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳಿ ದ್ದರು.

ಔರಂಗಾಬಾದ್ ಮತ್ತು ಗಯಾದಲ್ಲಿ ಸಾಮೂಹಿಕ ಸಾವು ಸಂಭವಿಸಿದ ನಂತರ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಬಿಹಾರ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಈ ವಿಷಯದ ಬಗ್ಗೆ ಉತ್ತರಿಸುವಂತೆ ಕೇಳಿದೆ.