Wednesday, 14th May 2025

ಕಾರುಗಳ ಹೆಡ್​ಲೈಟ್​ಗಳ ಬೆಳಕಿನಲ್ಲಿ ಪರೀಕ್ಷೆ ಬರೆದರು…!

ಪಾಟ್ನಾ: ಆಸನ ವ್ಯವಸ್ಥೆ ವಿಚಾರದಲ್ಲಿ ಆದ ವಿಳಂಬದಿಂದಾಗಿ ಬಿಹಾರ ಶಾಲಾ ಪರೀಕ್ಷಾ ಮಂಡಳಿ ಯ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂದ ಬೆಳಕಿನಲ್ಲಿ ಅಂದರೆ ಕಾಲೇಜು ಪಾರ್ಕಿಂಗ್​ನಲ್ಲಿ ನಿಲ್ಲಿಸಲಾದ ಕಾರುಗಳ ಹೆಡ್​ಲೈಟ್​ಗಳ ಬೆಳಕಿನ ಅಡಿಯಲ್ಲಿ ಪರೀಕ್ಷೆ ಬರೆಯುವಂತಹ ಪರಿಸ್ಥಿತಿ ಎದುರಾಗಿತ್ತು.

ಈ ಘಟನೆ ಮೋತಿಹಾರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಆಸನ ವ್ಯವಸ್ಥೆಯೇ ಇಲ್ಲದ ಹಿನ್ನೆಲೆ ಯಲ್ಲಿ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಬಾಲ್ಕನಿಯಲ್ಲಿ ಕುಳಿತು ಪರೀಕ್ಷೆ ಬರೆದಿದ್ದಾರೆ.

ಮಹಾರಾಜ್ ಹರೇಂದ್ರ ಕಿಶೋರ್ ಕಾಲೇಜಿನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಜಿಲ್ಲಾಡಳಿತವು ಕೇಂದ್ರದ ಅಧೀಕ್ಷಕರನ್ನು ಕೆಲಸದಿಂದ ತೆಗೆದು ಹಾಕಿದ್ದು ಪರೀಕ್ಷೆಯ ವೇಳೆಯಲ್ಲಿ ಉಂಟಾದ ಲೋಪದ ಬಗ್ಗೆ ತನಿಖೆಗೆ ಆದೇಶಿಸಿದೆ.

ಕೋವಿಡ್ ಪ್ರಕರಣಗಳು ಕಡಿಮೆಯಾಗಲು ಆರಂಭವಾಗುತ್ತಿದ್ದಂತೆಯೇ ಬಿಹಾರ ಶಾಲಾ ಪರೀಕ್ಷಾ ಮಂಡಳಿಯು 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದೆ.

ಪರೀಕ್ಷೆಯು ಸಂಜೆ 4:30ಕ್ಕೆ ಆರಂಭವಾಯಿತು ಎಂದು ಮೋತಿಹಾರಿ ಪೊಲೀಸರು ತಿಳಿಸಿದ್ದಾರೆ. ಚಟೌನಿ ಪೊಲೀಸ್ ಠಾಣೆಯು ಪರೀಕ್ಷಾರ್ಥಿಗಳಿಗೆ ಬೆಳಕನ್ನು ಒದಗಿಸಲು ಜನರೇಟರ್‌ಗಳನ್ನು ತಕ್ಷಣವೇ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ ವಾಹನಗಳ ಹೆಡ್​ಲೈಟ್​ ಬೆಳಕಿ ನಲ್ಲಿ ಪರೀಕ್ಷೆಗಳನ್ನು ಬರೆದಿದ್ದಾರೆ.