Sunday, 11th May 2025

ರಾಷ್ಟ್ರಪತಿ ಚುನಾವಣೆ: 11 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಯ ಮೊದಲ ದಿನವೇ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ದಾಖಲೆಗಳ ಕೊರತೆಯಿಂದಾಗಿ ಒಬ್ಬರ ನಾಮಪತ್ರ ತಿರಸ್ಕರಿಸಲಾಗಿದೆ. ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಜೂ.29ರವರೆಗೆ ನಡೆಯಲಿದೆ.

ಅಭ್ಯರ್ಥಿಯು ಮತದಾರರಾಗಿ ನೋಂದಾಯಿಸಿಕೊಂಡಿರುವ ಸಂಸದೀಯ ಕ್ಷೇತ್ರದ ಪ್ರಸ್ತುತ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ತೋರಿಸುವ ನಮೂನೆಯ ಪ್ರಮಾಣೀ ಕೃತ ಪ್ರತಿಯನ್ನು ಲಗತ್ತಿಸದ ಕಾರಣ ಒಬ್ಬ ಅಭ್ಯರ್ಥಿಯ ನಾಮನಿರ್ದೇಶನವನ್ನು ತಿರಸ್ಕರಿಸಲಾಗಿದೆ.

ಬುಧವಾರ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ದೆಹಲಿ, ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಅಭ್ಯರ್ಥಿಗಳಾಗಿದ್ದಾರೆ.

ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ ಯಾರು? ಎನ್ನುವುದರ ಕುರಿತು ಚರ್ಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು.

ದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾದಲ್ಲಿ ಬುಧವಾರ ಈ ಸಭೆ ನಡೆಸಲಾಯಿತು.