Thursday, 15th May 2025

ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ’ನೂರು ಕೋಟಿ ರೂ ಲಂಚ ಸಂಗ್ರಹ’ ಹೇಳಿಕೆ

ಮುಂಬೈ: ನಗರದಲ್ಲಿನಬಾರ್​, ರೆಸ್ಟೋರೆಂಟ್​ಗಳಿಂದ ಹಾಗೂ ಅಕ್ರಮ ವ್ಯವಹಾರಗಳಿಂದ ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸಿ ಕೊಡಬೇಕು ಎಂದು ಗೃಹ ಸಚಿವ ಅನಿಲ್ ದೇಶಮುಖ್ ಅವರ ಸೂಚನೆ ಇತ್ತು ಎಂಬ ಹಿರಿಯ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಹೇಳಿಕೆ ಬಿರುಗಾಳಿಯನ್ನೇ ಸೃಷ್ಟಿಸಿದೆ.

ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾಗಿದ್ದರ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಆರೋಪಿಸಿ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ರನ್ನು ವರ್ಗಾವಣೆ ಮಾಡಲಾಗಿತ್ತು. ಅವರನ್ನು ಮಹಾರಾಷ್ಟ್ರ ಗೃಹ ರಕ್ಷಕ ದಳದ ಮುಖ್ಯಸ್ಥರಾಗಿ ವರ್ಗಾಯಿಸಲಾಗಿತ್ತು.

ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು ಆರೋಪ ಮಾಡಿರುವ ಪರಮ್ ಬೀರ್ ಸಿಂಗ್, ಒಂದು ತಿಂಗಳಿಗೆ ನೂರು ಕೋಟಿ ರೂ ಲಂಚ ಸಂಗ್ರಹಿಸುವ ಗೃಹ ಸಚಿವ ಅನಿಲ್ ದೇಶಮುಖ್ ಅವರು ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಸೂಚನೆ ನೀಡಿದ್ದರು. ಈ ಗುರಿ ತಲುಪಲು ಮುಂಬೈನಲ್ಲಿ 1750 ಬಾರ್ ರೆಸ್ಟೋರಂಟ್​ಗಳಿವೆ. ಸರಿಯಾಗಿ ಕೆಲಸ ಮಾಡಿದರೆ 100 ಕೋಟಿ ಬರುತ್ತೆ ಎಂದು ಪತ್ರದಲ್ಲಿ ಸಿಂಗ್ ಉಲ್ಲೇಖಿಸಿದ್ದಾರೆ.

ಇದರಿಂದ ಕಸಿವಿಸಿಗೆ ಒಳಗಾದ ಗೃಹ ಸಚಿವ ಅನಿಲ್ ದೇಶಮುಖ್, ‘ಅಂಬಾನಿ ಮನೆ ಬಳಿ ಸ್ಪೋಟಕ ದೊರೆತಿರುವ ಪ್ರಕರಣ ಪರಮ್​ ಬೀರ್ ಸಿಂಗ್ ಅವರಿಗೂ ಸುತ್ತಿಕೊಳ್ಳುವ ಸಾಧ್ಯತೆ ಇದ್ದು, ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಇದರಿಂದ ಮಹಾ ವಿಕಾಸ್ ಅಗಾಡಿ ಸರ್ಕಾರದ ಮೇಲೆ ಕತ್ತಿ ಮಸೆಯುತ್ತಿರುವ ಬಿಜೆಪಿಗೆ ಬಹುದೊಡ್ಡ ಅಸ್ತ್ರವೊಂದು ಸಿಕ್ಕಂತಾಗಿದೆ. ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಅವರು, ‘ಕೂಡಲೇ ಅನಿಲ್ ದೇಶಮುಖ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ದೇಶಮುಖ್ ಅವರನ್ನು ವಜಾ ಮಾಡದಿದ್ದರೇ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದೆ’ ಎಂದು ಎಚ್ಚರಿಸಿದ್ದಾರೆ.

ಇನ್ನು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ‘ಮುಖ್ಯಮಂತ್ರಿ ಅವರು ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಮರ್ಥವಾಗಿದ್ದಾರೆ. ಅಷ್ಟಕ್ಕೂ ಪರಮ್ ಬೀರ್ ಇಷ್ಟು ದಿನ ಸುಮ್ಮನಿದ್ದು, ತಮ್ಮ ಮೇಲೆ ಆರೋಪ ಬಂದಾಗ ಮತ್ತೊಬ್ಬರ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ ಎಂಬುದನ್ನು ನೋಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಬಿಡುಗಡೆ ಮಾಡಿದ್ದು, ‘ಪತ್ರದಲ್ಲಿ ಪರಮ್ ಬೀರ್ ಸಿಂಗ್ ಸಹಿ ಮಾಡಿಲ್ಲ. ಹೀಗಾಗಿ ಪತ್ರದ ಕುರಿತು ತನಿಖೆ ನಡೆಯುತ್ತಿದೆ’ ಎಂದು ಹೇಳಿದೆ.

ಎಂಎನ್​​ಎಸ್ ಮುಖ್ಯಸ್ಥ ರಾಜ್​ ಠಾಕ್ರೆ ಅವರು, ‘ಅನಿಲ್ ದೇಶಮುಖ್ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೇ ಮುಖ್ಯಮಂತ್ರಿ, ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಈ ದೊಡ್ಡ ಭ್ರಷ್ಟಾಚಾರ ಹಗರಣವನ್ನು ಕೇಂದ್ರ ಸರ್ಕಾರವೇ ತನಿಖೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *